ಖ್ಯಾತ ನಿರ್ದೇಶಕರೊಂದಿಗೆ ಸಿನಿಮಾ, ಕೆಳ ಜಾತಿಯವನೆಂಬ ಅಸೂಯೆ ಅಪಪ್ರಚಾರಕ್ಕೆ ಕಾರಣ: ಕಂಬಳ ಶ್ರೀನಿವಾಸ ಗೌಡ
ಮಂಗಳೂರು, ಜುಲೈ 23: ಕಂಬಳ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಪ್ರಸಿದ್ಧ ಕಂಬಳ ಓಟಗಾರ ಮಿಜಾರು ಅಶ್ವತಪುರ ಶ್ರೀನಿವಾಸ ಗೌಡ ಮೇಲಿನ ಆರೋಪಗಳಿಗೆ ಸ್ವತಃ ಶ್ರೀನಿವಾಸಗೌಡ ಮಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನ್ನ ವಿರುದ್ಧ ದೂರು ನೀಡಿದ ಕಂಬಳ ಕೋಣಗಳ ಮಾಲೀಕ, ದಕ್ಷಿಣ ಕನ್ನಡ ಕಂಬಳ ಸಮಿತಿಯ ಸದಸ್ಯ ಕಳ್ಕುಡ ಮುಂಚೂರು ಲೋಕೇಶ್ ಶೆಟ್ಟಿ ಎಂಬುವರಿಗೆ ನನ್ನ ಮೇಲಿನ ವೈಯುಕ್ತಿಕ ದ್ವೇಷ , ಅಸೂಯೆ, ಕೆಳ ಜಾತಿಯವನಾಗಿರುವ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದಾರೆ ಎಂದೂ ಶ್ರೀನಿವಾಸ ಗೌಡ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರಿನ ಪತ್ರಿಕಾ ಭವನದಲ್ಲಿ ಕಂಬಳ ಕೋಣಗಳ ಮಾಲೀಕರ ಜೊತೆ ಸುದ್ದಿಗೋಷ್ಠಿ ನಡೆಸಿದ ಕಂಬಳ ಓಟಗಾರ ಶ್ರೀನಿವಾಸಗೌಡ, ನಾನು ಕುಡುಬಿ ಜಾತಿಯವನೆಂದು ನನ್ನನ್ನು ಕೀಳಾಗಿ ಕಾಣುತ್ತಿದ್ದ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರು, ಅವರ 'ಕಂಬಳ' ಸಿನಿಮಾದಲ್ಲಿ ನಟಿಸಲು ಒಪ್ಪದಿರುವುದರಿಂದಲೇ ನನ್ನ ಮೇಲೆ ಸುಖಾ ಸುಮ್ಮನೆ ಆರೋಪ ಹೊರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಂಬಳ ಓಟದ ಮೂಲಕ ಖ್ಯಾತ ಸ್ಪ್ರಿಂಟರ್ ಉಸೇನ್ ಬೋಲ್ಟ್ ಜೊತೆಗೆ ತುಲನೆ ಮಾಡಿ ಶ್ರೀನಿವಾಸ ಗೌಡ ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂದು ಕಂಬಳ ಸಮಿತಿಯ ಸದಸ್ಯ ಮುಚ್ಚೂರು ಕಲ್ಕುಡ ಶೆಟ್ಟಿಯವರು ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ಪಷ್ಟನೆ ನೀಡಿದ ಶ್ರೀನಿವಾಸ ಗೌಡ ಅವರು ನಾನು ಯಾವುದೇ ಸುಳ್ಳು ದಾಖಲೆ ಸೃಷ್ಟಿಸಿಲ್ಲ. ಯಾವುದೇ ತಪ್ಪು ಮಾಡಿಲ್ಲ. ಕಂಬಳದಲ್ಲಿ ಬಹಳ ಮಂದಿ ಓಟಗಾರರಿದ್ದಾರೆ, ಆದರೆ ನನ್ನೊಬ್ಬನನ್ನೇ ಟಾರ್ಗೆಟ್ ಮಾಡಿ ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೇರೆಯವರ ಸಿನಿಮಾ ಒಪ್ಪಿದ್ದಕ್ಕೆ ದೂರು
ಅವರ ವ್ಯಕ್ತಿತ್ವ ಅಷ್ಟೊಂದು ಸರಿಯಿರದ ಹಿನ್ನೆಲೆಯಲ್ಲಿ ನಾನು ಅವರ ಸಿನಿಮಾದಲ್ಲಿ ನಟಿಸಲು ಒಪ್ಪಿರಲಿಲ್ಲ. ಇದೀಗ ನಾನು ಖ್ಯಾತ ನಿರ್ದೇಶಕ ರಾಜೇಂದ್ರ ಬಾಬು ಸಿಂಗ್ ಅವರ 'ಬಿರ್ದುದ ಕಂಬಳ' ಸಿನಿಮಾದಲ್ಲಿ ನಟಿಸಲು ಒಪ್ಪಿದ್ದೇನೆ. ಈ ಕಾರಣದಿಂದಲೇ ಅವರು ನನ್ನ ಮೇಲೆ ಸುಳ್ಳು ಆಪಾದನೆ ಹೊರಿಸುತ್ತಿದ್ದಾರೆ. ಅಲ್ಲದೆ ನಾನು ಕಂಬಳ ಅಕಾಡೆಮಿಯ ಗುಣಪಾಲ ಕಡಂಬರ ಶಿಷ್ಯ ಎನ್ನುವ ಕಾರಣವೂ ಇದರ ಹಿಂದೆ ಅಡಗಿದೆ. ಆದ್ದರಿಂದ ನನ್ನ ಮೇಲೆ ಸುಳ್ಳು ಆಪಾದನೆ ಹೊರಿಸಿರುವ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದು ಶ್ರೀನಿವಾಸ ಗೌಡ ಹೇಳಿದರು.

ಸುಳ್ಳು ಪ್ರಚಾರ ಮಾಡಿ ಹಣ ಮಾಡಿಲ್ಲ
ನಾನು ಕಂಬಳ ಓಟದಲ್ಲಿ ಯಾವುದೇ ರೀತಿಯಾದ ಮೋಸವನ್ನು ಮಾಡುವುದಿಲ್ಲ ನಾನು ಕೋಣಗಳನ್ನು ಓಡಿಸುವ ಓಟಗಾರ ಮಾತ್ರ. ನನ್ನ ವೇಗ ಮತ್ತು ಗೆಲುವಿನ ಸಮಯವನ್ನ ನಿರ್ಧಾರ ಮಾಡುವುದು ಕಂಬಳದ ತೀರ್ಪುಗಾರರು ಮತ್ತು ಲೇಸರ್ ತಂತ್ರಜ್ಞಾನ. ನಾನು ಯಾವುದೇ ರೀತಿಯ ಸುಳ್ಳು ಪ್ರಚಾರವನ್ನು ಮಾಡಿ ಹಣವನ್ನು ಸಂಪಾದಿಸಿಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೂ ಸಿದ್ದನಿದ್ದೇನೆ ಅಂತ ಶ್ರೀನಿವಾಸಗೌಡ ಸವಾಲೆಸೆದಿದ್ದಾರೆ.
ದೂರುದಾರ ಲೋಕೇಶ್ ಶೆಟ್ಟಿ ನಮ್ಮ ಊರಿನವರು. ನಾನು ಕಂಬಳದಲ್ಲಿ ದಾಖಲೆ ಮಾಡಿದಾಗಲೇ ಅವರು ಕಂಬಳ ಅಂತಾ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿದ್ದರು. ಅದರಲ್ಲಿ ಆಕ್ಟ್ ಮಾಡುವಂತೆ ಕೇಳಿದ್ದರು. ಅವರು ನಮ್ಮ ಜಾತಿಯವರನ್ನು ಕೀಳಾಗಿ ಕಾಣುತ್ತಾರೆ. ಆದ್ದರಿಂದ ನಾನು ಸಿನಿಮಾ ಮಾಡಲು ಒಪ್ಪಿಕೊಂಡಿರಲಿಲ್ಲ. ಅದಕ್ಕಾಗಿ ಲೋಕೇಶ್ ಹೀಗೆ ಮಾಡುತ್ತಿರಬಹುದು ಎಂದರು.

ಸಹಾಯಧನ ಬಿಟ್ಟರೆ ಬೇರೆ ಯಾವುದೇ ಹಣ ಸಿಕ್ಕಿಲ್ಲ
ಲೇಸರ್ ಬೀಮ್ ತಂತ್ರಜ್ಞಾನದ ಜೊತೆ ಕಂಬಳ ಓಟ ವಿಡಿಯೋ ರೆಕಾರ್ಡ್ ಆಗುತ್ತದೆ. ಓಟವನ್ನು ನಕಲಿ ಅಂತಾ ಹೇಳಲು ಸಾಧ್ಯವಿಲ್ಲ. ನನಗೆ ಸರ್ಕಾರದಿಂದ ಒಟ್ಟು 5 ಲಕ್ಷ ಸಹಾಯಧನ ಬಂದಿದೆ. ಲೋಕೇಶ್ ಶೆಟ್ಟಿ ಹೇಳುವ ಹಾಗೆ ಸಿಕ್ಕ ಸಿಕ್ಕ ಕಡೆ ಹಣ ಸಂಗ್ರಹ ಮಾಡಿಲ್ಲ. ನನ್ನ ಮೇಲೆ ಅರೋಪಗಳನ್ನು ಮಾಡಿದುದರಿಂದ ಮಾನನಷ್ಟ ಮೊಕದ್ದಮೆ ಹೂಡುಡುತ್ತೇನೆ..ಕಾನೂನು ಸಮರ ಮಾಡಿ ನ್ಯಾಯ ಕೇಳುತ್ತೇನೆ ಅಂತಾ ಶ್ರೀನಿವಾಸ ಗೌಡ ಹೇಳಿದ್ದಾರೆ.

ಬೋಲ್ಟ್‌ಗೆ ಹೋಲಿಕೆ ಮಾಡಿದ್ದು ಮಾಧ್ಯಮ
2020ರ ಐಕಳ ಕಂಬಳೋತ್ಸವದಲ್ಲಿ ಶ್ರೀನಿವಾಸ ಗೌಡ 13.62 ಸೆಕೆಂಡ್ ನಲ್ಲಿ 142.5 ಮೀ. ದೂರ ಓಡಿ ಅತ್ಯಂತ ವೇಗದ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಅನ್ನು ಹಿಂದಿಕ್ಕಿ ಸಾಧನೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿತ್ತು. ಆದರೆ ಇದನ್ನು ನಾವು ಯಾರೂ ಮಾಧ್ಯಮಕ್ಕೆ ಮಾಹಿತಿ ನೀಡಿಲ್ಲ. ಅಲ್ಲದೆ ಯಾವುದೇ ಸಂದರ್ಭ ಶ್ರೀನಿವಾಸ ಗೌಡನನ್ನು ನಾವು ಉಸೇನ್ ಬೋಲ್ಟ್‌ಗೆ ಹೋಲಿಸಿಲ್ಲ. ಈ ಬಗ್ಗೆ ಹೇಳಿಕೆ ನೀಡಿದವರು ಸ್ವತಃ ಈಗ ದೂರು ನೀಡಿರುವ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿ ಮತ್ತು ವಿಜಯ ಕುಮಾರ್ ಕಂಗಿನಮನೆಯವರು. ಆದರೆ ಕೇವಲ ಕಂಬಳ ಅಕಾಡೆಮಿ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ಈ ರೀತಿಯ ಸುಳ್ಳು ಆಪಾದನೆ ಮಾಡಲಾಗುತ್ತಿದೆ ಎಂದು ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ಅವರು ಆರೋಪಿಸಿದರು.












Click it and Unblock the Notifications