ಲಾಕ್‌ಡೌನ್; ಮುಜರಾಯಿ ಇಲಾಖೆಗೆ 105 ಕೋಟಿ ನಷ್ಟ
ಮಂಗಳೂರು, ಜೂನ್ 27; ಕೋವಿಡ್ ಹರಡುವಿಕೆ ತಡೆಯಲು ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿತು. ಇದು ಜನ ಸಾಮಾನ್ಯರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿತು. ಆರ್ಥಿಕವಾಗಿ ಜೀವನವನ್ನೇ ಕುಗ್ಗಿಸುವಂತೆ ಮಾಡಿತು.
ಈ ಲಾಕ್‌ಡೌನ್ ಕೇವಲ ಜನಸಾಮಾನ್ಯರನ್ನು ಮಾತ್ರವಲ್ಲ ದೇವರನ್ನು ಬಿಟ್ಟಿಲ್ಲ ಅನ್ನೋದು ಗಮನಾರ್ಹ ವಾಗಿದೆ. ಲಾಕ್‌ಡೌನ್‌ನಿಂದ ರಾಜ್ಯದ ದೇವಾಲಯಗಳ ಹುಂಡಿಗಳೆಲ್ಲಾ ಖಾಲಿ-ಖಾಲಿಯಾಗಿದ್ದು, ಸುಮಾರು 105 ಕೋಟಿಗಿಂತ ಹೆಚ್ಚು ನಷ್ಟ ಮುಜರಾಯಿ ಇಲಾಖೆಗೆ ಆಗಿದೆ ಎಂದು ಅಂದಾಜಿಸಲಾಗಿದೆ.
ರಾಜ್ಯದಲ್ಲಿ ಸುಮಾರು 34 ಸಾವಿರ ದೇವಾಲಯಗಳಿದ್ದು, 144 ದೇವಸ್ಥಾನಗಳು 'ಎ' ವರ್ಗಕ್ಕೆ ಸೇರಿದೆ. ಈ ದೇವಾಲಯಗಳಲ್ಲಿ ವಾರ್ಷಿಕ ತಲಾ 25 ಲಕ್ಷ ರೂಪಾಯಿ ಆದಾಯ ಮುಜರಾಯಿ ಇಲಾಖೆಗೆ ಬರುತಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ಭಕ್ತರಿಗೆ ಪ್ರವೇಶ ನಿಷೇಧವಾಗಿದ್ದು, ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಿವೆ.

ರಾಜ್ಯದ ನಂಬರ್ 1 ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಾಕ್‌ಡೌನ್ ಕಾರಣದಿಂದ 22 ಕೋಟಿ ರೂಪಾಯಿ ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ತುಲಾಭಾರ ಸೇವೆಗಳಿಂದ ಕೋಟ್ಯಾಂತರ ರೂಪಾಯಿ ಆದಾಯ ಹರಿದುಬರುತಿತ್ತು.
ಆದರೆ ಲಾಕ್‌ಡೌನ್ ಕಾರಣದಿಂದ ಆದಾಯಗಳಿಗೆಲ್ಲಾ ಕೊಕ್ಕೆ ಬಿದ್ದಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಾದ ಕಟೀಲು ದುರ್ಗಾಪರಮೇಶ್ವರಿ 7 ಕೋಟಿ, ಪುತ್ತೂರು ಮಹಾಲಿಂಗೇಶ್ವರ 1.5 ಕೋಟಿ ರೂಪಾಯಿ, ಕದ್ರಿ ಮಂಜುನಾಥೇಶ್ವರ 2 ಕೋಟಿ, ಪೊಳಲಿ ರಾಜರಾಜೇಶ್ವರಿ 2 ಕೋಟಿ ರೂಪಾಯಿ ನಷ್ಟವುಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, "ದೇವಾಲಯಗಳಲ್ಲಿ ನಷ್ಟವುಂಟಾಗಿರುವ ಬಗ್ಗೆ ನಿಖರವಾದ ಅಂದಾಜು ಪಟ್ಟಿ ಮಾಡಿಲ್ಲ. ಆದರೆ ಈ ಬಾರಿ ಎಲ್ಲಾ ದೇವಾಲಯದಲ್ಲಿ ಶೇ 50ರಷ್ಟು ನಷ್ಟ ಉಂಟಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications