ವಿಮಾನ ಹತ್ತಿದ ಮಂಗಳೂರಿನ ಜೀವಂತ ಏಡಿ: ಚೀನಾದಲ್ಲಿ ಮಡ್&ರೆಡ್ ಕ್ರಾಬ್‌ಗೆ ಭರ್ಜರಿ ಡಿಮ್ಯಾಂಡ್
ಮಂಗಳೂರು, ಅಕ್ಟೋಬರ್ 19: ಮಂಗಳೂರು ಅಂದಾಕ್ಷಣ ಮೀನುಗಳ ನೆನಪಾಗುತ್ತದೆ. ವಿಧವಿಧವಾದ ಮೀನುಗಳು ಮಂಗಳೂರಿನಿಂದ ನಾನಾ ರಾಜ್ಯಗಳಿಗೆ ರವನೆಯಾಗುತ್ತದೆ. ಈಗ ಜೀವಂತ ಏಡಿಗಳೂ ಚೀನಾ, ಮಲೇಶಿಯಾ, ಸಿಂಗಾಪುರಗಳಿಗೆ ರವಾನೆಯಾಗುತ್ತಿದ್ದು, ಮಂಗಳೂರಿನ ಏಡಿಗಳೂ ಫ್ಲೈಟ್ ಹತ್ತುವ ಭಾಗ್ಯವನ್ನು ಪಡೆದಿದೆ.
ಅರಬ್ಬಿ ಸಮುದ್ರದಲ್ಲಿ ಪ್ರಾಣ ಒತ್ತೆ ಇಟ್ಟು ಮೀನು ಬೇಟೆಯಾಡುವ ಕಡಲ ಮಕ್ಕಳು ಪ್ರತಿನಿತ್ಯ ಲಕ್ಷಾಂತರ ರೂಪಾಯಿಯ ಆದಾಯವನ್ನು ತರುತ್ತಿದ್ದಾರೆ. ಮಂಗಳೂರಿನ ಮೀನುಗಳು ಹೊರ ರಾಜ್ಯಗಳಿಗೆ, ಕೆಲ ವಿದೇಶಗಳಿಗೂ ರಫ್ತು ಆಗುತ್ತದೆ. ಮಂಗಳೂರಿನ ಮೀನಿಗೆ ಗಲ್ಫ್ ರಾಷ್ಟ್ರಗಳಲ್ಲಿ ಬೇಡಿಕೆ ಇದ್ದರೂ ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಮಂಗಳೂರಿನ ಏಡಿಗಳೂ ಚಾರ್ಮ್ ಮೂಡಿಸಿದೆ.

ಮಂಗಳೂರಿನಿಂದ ಜೀವಂತ ಏಡಿಗಳು ಚೀನಾ, ಮಲೇಶಿಯಾ, ಸಿಂಗಾಪುರ ದೇಶಗಳಿಗೆ ಫ್ಲೈಟ್ ಹತ್ತಿ ವಿದೇಶದ ಮಾರುಕಟ್ಟೆಗಳಿಗೆ ಸೇರುತ್ತಿದೆ. ಮಂಗಳೂರಿನಿಂದ ವಿಮಾನದ ಮೂಲಕ ಕೊಲ್ಕತ್ತಾ ಸೇರುವ ಏಡಿಗಳು ಅಲ್ಲಿಂದ ವಿದೇಶಗಳಿಗೆ ಪ್ರಯಾಣ ಬೆಳೆಸುತ್ತಿದೆ.
ಮಂಗಳೂರಿನ ಬಂದರು ಪ್ರದೇಶದ ಸಹೋದರರಾದ ಅಬ್ದುಲ್ ಸಮಾದ್, ಮಹಮ್ಮದ್ ಆಸೀಫ್, ಫಯಜ್ ಅಹ್ಮದ್ ಒಟ್ಟು ಸೇರಿ ಎಸ್.ಎಂ ಫಿಶರೀಸ್ ಎಂಬ ಸಂಸ್ಥೆ ಹುಟ್ಟು ಹಾಕಿದ್ದು, ಈ ಸಂಸ್ಥೆ ಮೂಲಕ ಈಗ ಏಡಿಗಳನ್ನು ವಿದೇಶಗಳಿಗೆ ರವಾನೆ ಮಾಡುತ್ತಿದ್ದಾರೆ. ಮಡ್ ಕ್ರಾಬ್ ಎನ್ನುವ ದೊಡ್ಡ ಜಾತಿಯ ಏಡಿ ಮತ್ತು ರೆಡ್ ಕ್ರಾಬ್‌ಅನ್ನು ವಿದೇಶಗಳಿಗೆ ಕಳುಹಿಸುತ್ತಿದ್ದಾರೆ
ಮಡ್ ಕ್ರಾಬ್ ಏಡಿಗಳು ನದಿ ಮತ್ತು ಸಮುದ್ರ ಸೇರುವ ಜಾಗದ ಕಲ್ಲು ಬಂಡೆಗಳ ಮಧ್ಯೆ ವಾಸಿಸುತ್ತದೆ. ಚೀನಾದಲ್ಲಿ ಈ ಏಡಿಗೆ ತುಂಬಾ ಬೇಡಿಕೆ ಕೂಡಾ ಇದೆ. ಆಹಾರಕ್ಕೆ ಮಾತ್ರ ಸಿಮೀತವಾಗಿರುವ ಈ ಏಡಿಯನ್ನು ಬೇಟೆಯಾಡಲು ಪ್ರತ್ಯೇಕ ಬಲೆ ಬೇಕಾಗುತ್ತದೆ. ನಾಡದೋಣಿ ಬಳಸಿ ಈ ಏಡಿಗಳನ್ನು ಹಿಡಿಯುವ ಮೀನುಗಾರರಿಗೆ ಆಕರ್ಷಕ ದರ ನೀಡಿ ಏಡಿ ಖರಿದೀಸಿ ಮೀನುಗಾರರಿಗೂ ಈ ರೀತಿಯ ಏಡಿಗಳನ್ನು ಹಿಡಿಯಲು ಪ್ರೋತ್ಸಾಹ ನೀಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಈ ಏಡಿಯ ದರ ಒಂದೂವರೆ ಸಾವಿರದಿಂದ ಎರಡು ಸಾವಿರದವರೆಗೂ ಇದೆ. ನೀರಿಲ್ಲದೇ ಮೂರು ದಿನಗಳ ಕಾಲ ಬದುಕುವ ಈ ಏಡಿಗಳು ನೀರಿನಿಂದ ಹೊರಬಂದ ಮೇಲೆ ಯಾವುದೇ ಆಹಾರ ಸೇವಿಸುವುದಿಲ್ಲ. ಹೀಗಾಗಿ ಮಡ್ ಕ್ರಾಬ್ ಏಡಿಗಳಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ ಎನ್ನೋದು ಸಂಸ್ಥೆಯ ಪಾಲುದಾರರಲ್ಲಿ ಒಬ್ಬರಾದ ಫಯಾಜ್ ಅಹಮ್ಮದ್ ಅವರ ಅಭಿಪ್ರಾಯವಾಗಿದೆ.
2008ರಲ್ಲಿ ಆರಂಭವಾದ ಈ ಸಂಸ್ಥೆ ಈಗ ಮುನ್ನೂರು ಕೆ.ಜಿಗಳಷ್ಟು ಏಡಿಯನ್ನು ಎರಡು ದಿನಗಳಿಗೊಮ್ಮೆ ವಿದೇಶಕ್ಕೆ ಕಳುಹಿಸುತ್ತಾರೆ. ಮೊದಲು ಚೆನೈ ಮೂಲದ ವ್ಯಕ್ತಿ ಕಡಿಮೆ ದರ ಕೊಟ್ಟು ಇಲ್ಲಿನ ಮೀನುಗಾರರಿಂದ ಏಡಿಗಳನ್ನು ಖರೀದಿ ಮಾಡಿ ವಿದೇಶಕ್ಕೆ ರವಾನೆ ಮಾಡುತ್ತಿದ್ದರು.
ಆ ಬಳಿಕ ಇದೇ ಕೆಲಸವನ್ನು ಮುಂದುವರಿಸಿದ ಸಹೋದರರು ಈಗ ಮಂಗಳೂರಿನಿಂದ ಕಾರವಾರದವರೆಗೆ ಮಡ್ ಕ್ರಾಬ್ ಬೇಟೆಯಾಡುವ ಮೀನುಗಾರರನ್ನು ಹೊಂದಿದ್ದಾರೆ. ಮಂಗಳೂರಿನಿಂದ ಕಾರವಾರದವರೆಗೆ ಎರಡು ದಿನಗಳಿಗೊಮ್ಮೆ ಆಕರ್ಷಕ ದರ ನೀಡಿ ಈ ಏಡಿಗಳನ್ನು ಖರೀದಿಸಿ , ಥರ್ಮಕೋಲ್‌ನಲ್ಲಿ ಪ್ಯಾಕ್ ಮಾಡಿ ವಿದೇಶಗಳಿಗೆ ಜೀವಂತ ಏಡಿಗಳನ್ನು ಕಳುಹಿಸಲಾಗುತ್ತಿದೆ.












Click it and Unblock the Notifications