Just In: ಪ್ರವೀಣ್ ಶವ ಮೆರವಣಿಗೆ ವೇಳೆ ಲಾಠಿಚಾರ್ಜ್, ಪೊಲೀಸರ ವರ್ಗಾವಣೆ
ಮಂಗಳೂರು, ಜುಲೈ 29: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ಬಳಿಕ ಪ್ರವೀಣ್ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಲಾಠಿಚಾರ್ಜ್ ಮಾಡಿದ್ದ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಪ್ರವೀಣ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣಾ ಎಸ್‍ಐಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಬಿಜೆಪಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣೆಯ ಪಿಎಸ್ಸೈಗಳ ವರ್ಗಾವಣೆ ಮಾಡಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ.

ವಿಟ್ಲ ಠಾಣೆಯ ಪಿಎಸ್‍ಐ ಮಂಜುನಾಥ್ ಸುಬ್ರಹ್ಮಣ್ಯ ಠಾಣೆಗೆ, ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್‍ಐ ಸುಹಾನ್ ಆರ್. ಅವರನ್ನು ಬೆಳ್ಳಾರೆ ಠಾಣೆಗೆ ನೇಮಕ ಮಾಡಲಾಗಿದೆ. ವರ್ಗಾವಣೆಯಾದ ಪಿಎಸ್ಸೈಗಳಿಗೆ ಇನ್ನು ಕೆಲಸದ ಸ್ಥಳ ನಿಗದಿ ಮಾಡಿಲ್ಲ. ಇಬ್ಬರು ಅಧಿಕಾರಿಗಳಿಗೆ ಮಂಗಳೂರು ಐಜಿ ಕಚೇರಿಯಲ್ಲಿ ವರದಿ ಮಾಡಲು ಸೂಚನೆ ನೀಡಲಾಗಿದೆ.
ಕಾಸರಗೋಡಿನ ಹಿರಿಯ ಆರ್ಎಸ್ಎಸ್ ಕಾರ್ಯಕರ್ತ ರಮೇಶ್ ಮೇಲೆ ಪೊಲೀಸರು ಲಾಠಿ ಬೀಸಿದ್ದರು ಬಳಿಕ ಅಧಿಕಾರಿಗಳ ಅಮಾನತಿಗೆ ಒತ್ತಡ ಹಾಕಲಾಗಿತ್ತು. ಪೊಲೀಸರ ಮೇಲೆ ಕ್ರಮ ಕೈಗೊಳ್ಳದ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಕಾರ್ಯಕರ್ತರು ಧಿಕ್ಕಾರ ಕೂಗಿದ್ದರು.

ಮಂಗಳವಾರ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಶವಯಾತ್ರೆ ವೇಳೆ ಪೊಲೀಸರು ಮತ್ತು ಹಿಂದೂ ಸಂಘಟನೆ ಯುವಕರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೇ ಕೆಲವರು ಪೊಲೀಸರತ್ತ ಕಲ್ಲುತೂರಾಟ ನಡೆಸಿದ್ದರಿಂದ, ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.
ಈ ವೇಳೆ ಕಲ್ಲು ತೂರದಂತೆ ಮನವಿ ಮಾಡಿದರೂ ಬಗ್ಗದ ಕೆಲವು ಉದ್ರಿಕ್ತರ ಗುಂಪು ಕಲ್ಲು ತೂರುವುದನ್ನು ಮುಂದುವರಿಸಿದ್ದಕ್ಕೆ ಖಾಕಿ ಪಡೆ ಕೊನೆಗೆ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಕೆಲಸ ಮಾಡಿತ್ತು. ಘಟನೆಯಲ್ಲಿ ಪೊಲೀಸರ ಲಾಠಿ ಏಟಿನಿಂದ ಕೆಲವು ಹಿಂದೂ ಕಾರ್ಯಕರ್ತರು ಗಾಯಗೊಂಡಿದ್ದರು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಇನ್ನು, ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಅಂತರಾಜ್ಯಗಳ ವಿಚಾರ ಇರುವ ಹಿನ್ನೆಲೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿಂದೆ ಕೂಡ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವ ಬಗ್ಗೆ ವದಂತಿಗಳಿದ್ದವು.












Click it and Unblock the Notifications