ಕನ್ನಡ ಶಾಲೆಗೆ ಮಲಯಾಳಂ ಶಿಕ್ಷಕನ ನೇಮಿಸಿದ ಕೇರಳ ಸರ್ಕಾರ
ಮಂಗಳೂರು, ಮಾರ್ಚ್ 16; ಕನ್ನಡದ ವಿರುದ್ಧ ಕೇರಳ ಸರ್ಕಾರ ಮತ್ತೆ ಮಲತಾಯಿ ಧೋರಣೆ ಬೀರಿದೆ. ಕನ್ನಡ ಶಾಲೆಗೆ ಕನ್ನಡ ಬಾರದ ಮಲಯಾಳಂ ಶಿಕ್ಷಕನನ್ನು ಸರ್ಕಾರ ನೇಮಿಸಿದೆ. ಕಾಸರಗೋಡು ಜಿಲ್ಲೆಯ ಅಂಗಡಿಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಲಯಾಳಂ ಶಿಕ್ಷಕನ ನೇಮಕವಾಗಿದ್ದು,ಕೇರಳ ಸರ್ಕಾರದ ಈ ನಿರ್ಧಾರಕ್ಕೆ ಜನ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅಂಗಡಿ ಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೇರಳದ ಕೊಟ್ಟಾಯಂ ಜಿಲ್ಲೆಯ ತಿರುವಾಂಕೂರ್ ನಿವಾಸಿ ಜೋಕಬ್ ಎಂಬ ಶಿಕ್ಷಕನ ನೇಮಕವಾಗಿದೆ. ಕನ್ನಡ ಮಕ್ಕಳೇ ಇರುವ ಈ ಶಾಲೆಗೆ ಕನ್ನಡ ಬಾರದ ಮಲಯಾಳಂ ಶಿಕ್ಷಕ ನೇಮಕವಾಗಿರೋದು ಗಡಿನಾಡ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.
ಅಂಗಡಿಮೊಗರುವಿನ ಕನ್ನಡ ಫ್ರೌಢ ಶಾಲೆಯಲ್ಲಿ ಮಲಯಾಳಂ ಶಿಕ್ಷಕ ಸಮಾಜ ವಿಜ್ಞಾನ ಪಾಠ ಭೋಧಿಸಲಿದ್ದಾರೆ. 50 ಅಧಿಕ ಕನ್ನಡ ಮಕ್ಕಳಿರುವ ಫ್ರೌಢ ಶಾಲೆ ಇದಾಗಿದ್ದು, ಕನ್ನಡ ಬಾರದ ಮಲೆಯಾಳಂ ಶಿಕ್ಷಕನನ್ನು ನೇಮಿಸಿದ ಸರ್ಕಾರದ ನಿರ್ಧಾರದ ಬಗ್ಗೆ ಗಡಿನಾಡ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೋಕಬ್ ಕೇರಳದ ಆಡಳಿತ ಪಕ್ಷದ ಬೆಂಬಲಿಗನಾಗಿದ್ದು, ಇದೇ ಕಾರಣದಿಂದ ರಾಜಕೀಯ ಪ್ರಭಾವದಿಂದ ಮಲಯಾಳಂ ಶಿಕ್ಷಕನನ್ನು ನೇಮಿಸಿರುವ ಆರೋಪ ವ್ಯಕ್ತವಾಗಿದೆ. ಅಂಗಡಿಮೊಗರು ಪ್ರದೇಶ ಸಿಪಿಐಎಂ ಬಾಹುಳ್ಯದ ಕೇಂದ್ರವಾಗಿದ್ದು, ಅದೇ ಭಾಗಕ್ಕೆ ಶಿಕ್ಷಕನನ್ನು ನೇಮಕ ಮಾಡಿರೋದು ಜನರಿಗೆ ವಿರೋಧ ಮಾಡುವುದಕ್ಕೂ ಅವಕಾಶವನ್ನು ನೀಡಲಾಗಿಲ್ಲ. ಹೀಗಾಗಿಕರ್ನಾಟಕ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಲು ಗಡಿನಾಡ ಕನ್ನಡಿಗರು ಒತ್ತಾಯ ಮಾಡಿದ್ದಾರೆ.
ಸದ್ಯ ಫ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಮಯವೂ ಹತ್ತಿರ ಬಂದಿರುವುದರಿಂದ ಈಗ ಮಲಯಾಳಂ ಶಿಕ್ಷಕನ ನೇಮಕ ಮಾಡಿದರೆ ಪರೀಕ್ಷೆ ಸಮಯವಾಗಿರೋದರಿಂದ ಕನ್ನಡ ಶಿಕ್ಷಕನ ನೇಮಕ ಮಾಡುವಂತೆ ಪ್ರತಿಭಟನೆ ಸಾಧ್ಯತೆ ಕಡಿಮೆಯೂ ಇದೆ. ಈ ಹಿನ್ನಲೆಯಲ್ಲಿ ಈಗ ಶಿಕ್ಷಕನನ್ನು ನೇಮಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆತನನ್ನೇ ಮುಂದುವರಿಸುವ ಸರ್ಕಾರದ ಯೋಚನೆ ಸರ್ಕಾರದ್ದಾಗಿದೆ ಅಂತಾ ಗಡಿನಾಡ ಕನ್ನಡಿಗರು ಆರೋಪಿಸಿದ್ದಾರೆ.
ಹೀಗಾಗಿ ಕೇರಳದಲ್ಲಿ ಕನ್ನಡ ಮತ್ತು ಕನ್ನಡ ಶಾಲೆಯನ್ನು ರಕ್ಷಣೆ ಮಾಡುವಂತೆ ಕರ್ನಾಟಕ ಸರ್ಕಾರವನ್ನು ಗಡಿನಾಡ ಕನ್ನಡಿಗರು ಒತ್ತಾಯಿಸಿದ್ದಾರೆ. ಈಗಾಗಲೇ ಗಡಿ ಜಿಲ್ಲೆಯಾದ ಕಾಸರಗೋಡುವಿನಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿದ್ದು, ಇದ್ದ ಶಾಲೆಗಳಲ್ಲಿಯೂ ಕನ್ನಡ ಬಾರದ ಶಿಕ್ಷಕನನ್ನು ನೇಮಕ ಮಾಡಿ ಕನ್ನಡ ಕಲಿಯುವ ವಿದ್ಯಾರ್ಥಿಗಳ ಬಾಳಿನಲ್ಲಿ ಚೆಲ್ಲಾಟ ಆಡುತ್ತಿದ್ದಾರೆ ಎಂದು ಗಡಿನಾಡ ಕನ್ನಡಿಗರು ಆರೋಪಿಸಿದ್ದಾರೆ.
ಕಾಸರಗೋಡು ಕೇರಳದ ಜೊತೆ ವಿಲೀನವಾದ ಬಳಿಕ ಭಾಷಾವಾರು ಸಮಸ್ಯೆಯನ್ನು ಗಡಿಭಾಗದ ಜನರು ತೀವ್ರವಾಗಿ ಅನುಭವಿಸಿದ್ದರು. ಕಾಸರಗೋಡುವಿನ ಕನ್ನಡ ಶಾಲೆಯ ನೈಜ ದುಸ್ಥಿತಿಯನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದಲ್ಲಿ ಅನಾವರಣ ಮಾಡಿದ್ದರು. ಆದಾದ ಬಳಿಕವೂ ಕಾಸರಗೋಡುವಿನ ಕನ್ನಡ ಶಾಲೆಗಳ ದುಸ್ಥಿತಿ ಬದಲಾಗದೇ ಇರೋದು, ಗಡಿನಾಡ ಕನ್ನಡ ಶಾಲೆಗಳ ಬಗ್ಗೆ ರಾಜ್ಯ ಸರ್ಕಾರ ಕ್ಯಾರೇ ಅನ್ನದಿರೋದು ಮಾತ್ರ ದುರಂತ.












Click it and Unblock the Notifications