Ayodhya: ಶ್ರೀರಾಮ ಮೂರ್ತಿಗೆ ಕಾರ್ಕಳದ ಕೃಷ್ಣಶಿಲೆ, ಖುಷಿ ಹಂಚಿಕೊಂಡ ಕೇಂದ್ರ ಸಚಿವರು
ಕರಿಯಕಲ್ಲಿನ ಊರು ಎಂದು ಹೆಸರಾದ ಕಾರ್ಕಳದ ಈದು ಪ್ರದೇಶದಿಂದ, ಬೃಹತ್ ಗಾತ್ರದ ಕಲ್ಲು ತುಂಡು ಉತ್ತರ ಪ್ರದೇಶದ ಅಯೋಧ್ಯೆಗೆ ರವಾನಿಸಲಾಗಿದೆ. ಗುರುವಾರ ವಿಶೇಷ ಪೂಜೆ ನಡೆಸುವ ಮೂಲಕ, ದೊಡ್ಡ ಲಾರಿಯಲ್ಲಿ ಭಾರಿ ತೂಕದ ಕಲ್ಲನ್ನು ಅಯೋಧ್ಯೆಗೆ ಕೊಂಡೊಯ್ಯಲಾಗಿದೆ.
ಮಂಗಳೂರು, ಮಾರ್ಚ್18: ಕೋಟ್ಯಂತರ ಹಿಂದೂಗಳ ಶ್ರದ್ಧಾ ಭಕ್ತಿಯ ಕೇಂದ್ರವಾಗಲಿರುವ ಅಯೋಧ್ಯೆ ಶ್ರೀರಾಮ ಜನ್ಮ ಭೂಮಿಯಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಮೂರ್ತಿ ನಮ್ಮ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದು ಗ್ರಾಮದ ಕಲ್ಲಿನಿಂದ ತಯಾರಾಗಲು ಆಯ್ಕೆಯಾಗಿರುವ ವಿಚಾರ ಕರಾವಳಿಯ ಶ್ರೀರಾಮ ಭಕ್ತರಲ್ಲಿ ಸಂಭ್ರಮ ಮೂಡಿಸಿದೆ.
ಅಯೋಧ್ಯೆಯ ಶ್ರೀ ರಾಮ ಮೂರ್ತಿಗೆ ಆಯ್ಕೆಯಾದ ಕಾರ್ಕಳದ ಕೃಷ್ಣಶಿಲೆ
— Pralhad Joshi (@JoshiPralhad) March 17, 2023
ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ಎನ್ನುವಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭ್ಯವ ಪ್ರಭು ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪವಿತ್ರ ಶ್ರೀ ರಾಮರ ಮೂರ್ತಿಗೆ ಕರ್ನಾಟಕದ ಕಾರ್ಕಳದ ಈದು ಗ್ರಾಮದ ಕೃಷ್ಣಶಿಲೆ ಆಯ್ಕೆಯಾಗಿದೆ.
(1/3) pic.twitter.com/LEbFhR1dul
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದಲ್ಲಿ, ಸ್ಥಾಪಿಸಲು ಉದ್ದೇಶಿಸಲಾಗಿರುವ ರಾಮನ ಪ್ರತಿಮೆ ನಿರ್ಮಾಣಕ್ಕೆ, ಉಡುಪಿ ಜಿಲ್ಲೆಯ ಕಾರ್ಕಳದಿಂದ ಈಗ ಕಲ್ಲು ತರಿಸಿಕೊಳ್ಳಲಾಗಿದೆ. ದೇಶದ ಅನೇಕ ಭಾಗಗಳಿಂದ ಕಲ್ಲು ತರೆಸಿಕೊಂಡು, ಗುಣಮಟ್ಟ ಪರೀಕ್ಷಿಸಿದ ಬಳಿಕ, ಅಂತಿಮವಾಗಿ ಯಾವ ಕಲ್ಲಿನಿಂದ ಪ್ರತಿಮೆ ಮಾಡಬಹುದು ಎನ್ನುವುದನ್ನು ಶಿಲ್ಪಿಗಳು ನಿರ್ಧರಿಸುತ್ತಾರೆ.

ಕರಿಯಕಲ್ಲಿನ ಊರು ಎಂದು ಹೆಸರಾದ ಕಾರ್ಕಳದ ಈದು ಪ್ರದೇಶದಿಂದ, ಬೃಹತ್ ಗಾತ್ರದ ಕಲ್ಲು ತುಂಡು ಉತ್ತರ ಪ್ರದೇಶದ ಅಯೋಧ್ಯೆಗೆ ರವಾನಿಸಲಾಗಿದೆ. ಗುರುವಾರ ವಿಶೇಷ ಪೂಜೆ ನಡೆಸುವ ಮೂಲಕ, ದೊಡ್ಡ ಲಾರಿಯಲ್ಲಿ ಭಾರಿ ತೂಕದ ಕಲ್ಲನ್ನು ಅಯೋಧ್ಯೆಗೆ ಕೊಂಡೊಯ್ಯಲಾಗಿದೆ.
ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಲ್ಲು ಅಯೋಧ್ಯೆಗೆ ರವಾನೆಯಾಗುವ ಸಂದರ್ಭದಲ್ಲಿ ಕಾರ್ಕಳದ ವಿಶ್ವ ಹಿಂದೂ ಪರಿಷತ್ ಭಜರಂಗದಳದ ನೂರಾರು ಕಾರ್ಯಕರ್ತರು ಈ ವೇಳೆ ಹಾಜರಿದ್ದು, ಕಲ್ಲು ಸಾಗಾಟಕ್ಕೆ ನೆರವಾಗಿದ್ದಾರೆ.

ಮಾಜಿ ಸಚಿವ ನಾಗರಾಜ ಶೆಟ್ಟಿಯವರ ಪುತ್ರ ಗಣೇಶ್ ಶೆಟ್ಟಿಯವರ ಮಾಲಕತ್ವದ ಶ್ರೀಗಣೇಶ್ ಟ್ರಾನ್ಸ್‌ಪೋರ್ಟ್ ಲಾರಿಯಲ್ಲಿ ಕಾರ್ಕಳದಿಂದ ಅಯೋಧ್ಯೆಗೆ ಕಲ್ಲು ರವಾನೆ ಮಾಡಲಾಗಿದೆ.
ಇತ್ತೀಚಿಗೆ ಸೀತಾ-ರಾಮ ಮೂರ್ತಿಗಾಗಿ ನೇಪಾಳದಿಂದ ಸಾಲಿಗ್ರಾಮ ಶಿಲೆ ತರಿಸಿಕೊಳ್ಳಲಾಗಿತ್ತು. ಆದರೆ ಈ ಶಿಲೆ ಪ್ರತಿಮೆ ನಿರ್ಮಾಣಕ್ಕೆ ಯೋಗ್ಯವಲ್ಲ ಎಂದು ಹಿರಿಯ ಕುಶಲಕರ್ಮಿಗಳು ನಿರ್ಧಾರಕ್ಕೆ ಬಂದಿದ್ದರು. ಈ ಹಿನ್ನಲೆಯಲ್ಲಿ ದೇಶದ ವಿವಿಧ ಕಡೆಗಳಿಂದ ಬೇರೆ ಬೇರೆ ಗುಣಮಟ್ಟದ ಕಲ್ಲುಗಳನ್ನು ತರಿಸಿಕೊಳ್ಳಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಅಮರ ಶಿಲ್ಪಿ ಬೀರ ಕಲ್ಕುಡನ ಪಾದ ಸ್ಪರ್ಶದಿಂದ ಪುನೀತವಾಗಿ ಶಿಲ್ಪಿಗಳ ತವರೂರು ಎಂದು ಖ್ಯಾತಿ ಪಡೆದಿರುವ ಕಾರ್ಕಳದ ಊರಿನ ಕೃಷ್ಣ ಶಿಲೆಗೆ ರಾಮನಾಗುವ ಭಕ್ತಿಯೋಗ ಒಲಿದು ಬರಲಿ ಎಂದು ಸ್ಥಳೀಯರು ಆಶಿಸಿದ್ದಾರೆ.
ಈ ವಿಚಾರವನ್ನು ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮೂಲಕ ತಿಳಿಸಿದ್ದಾರೆ. "ಅಯೋಧ್ಯೆಯ ಶ್ರೀ ರಾಮ ಮೂರ್ತಿಗೆ ಆಯ್ಕೆಯಾದ ಕಾರ್ಕಳದ ಕೃಷ್ಣಶಿಲೆ ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ಎನ್ನುವಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭ್ಯವ ಪ್ರಭು ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪವಿತ್ರ ಶ್ರೀ ರಾಮರ ಮೂರ್ತಿಗೆ ಕರ್ನಾಟಕದ ಕಾರ್ಕಳದ ಈದು ಗ್ರಾಮದ ಕೃಷ್ಣಶಿಲೆ ಆಯ್ಕೆಯಾಗಿದೆ.
ಶಿಲ್ಪಿಗಳ ತವರೂರು ಎಂದೇ ಖ್ಯಾತವಾಗಿರುವ ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ ಶಿಲೆ ಆಯ್ಕೆಯಾಗಿದ್ದು, ಪೂರ್ತಿ ವಿಶ್ವವೇ ಈ ಶಿಲೆಯಿಂದ ರೂಪುಗೊಳ್ಳಲಿರುವ ಭಗವಾನ್ ಶ್ರೀ ರಾಮನ ದರ್ಶನ ಪಡೆಯಲಿದೆ ಎಂಬುದು ನಮ್ಮನ್ನು ಪುಳಕಿತರನ್ನಾಗಿ ಹಾಗೂ ಪುನೀತರನ್ನಾಗಿಸುವಂತಹದಾಗಿದೆ. ಈ ಸೇವೆ ಮಾಡುವ ಅವಕಾಶವನ್ನು ರಾಜ್ಯಕ್ಕೆ ನೀಡಿದ ಪ್ರಭು ಶ್ರೀ ರಾಮನಿಗೆ ಶಿರಸಾಷ್ಟಾಂಗ ನಮಸ್ಕಾರಗಳು" ಎಂದು ಬರೆದುಕೊಂಡಿದ್ದಾರೆ.
ಇನ್ನು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಶೇ.70ರಷ್ಟು ಪೂರ್ಣಗೊಂಡಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಮುಂದಿನ ವರ್ಷ ಜನವರಿಯಲ್ಲಿ ಶ್ರೀರಾಮ ದೇವಾಲಯದ ಗರ್ಭಗುಡಿಯಲ್ಲಿ ರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಹಾಗೂ ಶ್ರೀರಾಮನ ದೇಗುಲವು 2024ರ ಜನವರಿಯಿಂದ ಸಾರ್ವಜನಿಕರಿಗೆ ಮುಕ್ತವಾಗಲಿಗೆ ಎಂದು ಈಗಾಗಲೇ ಟ್ರಸ್ಟ್ ತಿಳಿಸಿದೆ. ಹೀಗಾಗಿ ಸಿದ್ಧತೆ ಭರದಿಂದ ಸಾಗುತ್ತಿದೆ.












Click it and Unblock the Notifications