ಚಿತ್ರಗಳು; ಕಂಬಳ ಕಲರವದಲ್ಲಿ ಮಿಂದೆದ್ದ ಕುಡ್ಲದ ನಗರವಾಸಿಗಳು
ಮಂಗಳೂರು, ಮಾರ್ಚ್ 27; ಕಂಬಳ ಕರಾವಳಿಯ ಜಾನಪದ ಕ್ರೀಡೆ. ಕರಾವಳಿಯಲ್ಲಿರುವಷ್ಟು ಕಂಬಳದ ಕ್ರೇಜ್ ಬೇರೆಲ್ಲೂ ಕಾಣಸಿಗದು. ಆದರೆ ನಗರೀಕರಣ ಬೆಳೆಯುತ್ತಿದ್ದಂತೆ ಕಂಬಳದಂತಹ ಹಳ್ಳಿ ಸೊಗಡಿನ ಆಚರಣೆಗಳು ನಗರ ಪ್ರದೇಶದ ಜನತೆಗೆ ದೂರವಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಅಂತಹ ಭಾವನೆಯನ್ನು ದೂರ ಮಾಡುವ ಯತ್ನ ಮಂಗಳೂರಿನಲ್ಲಿ ನಡೆಯುತ್ತಿದೆ.
ಆಗಸದೆತ್ತರಕ್ಕೆ ಕೆಸರು ಚಿಮ್ಮಿಸಿ ಓಡುವ ಕೋಣಗಳು. ಕೋಣವನ್ನು ಬೆನ್ನಟ್ಟಿ ಓಡಿಸುವ ಓಟಗಾರರು. ಇದು ಕರಾವಳಿಯ ವೀರ ಜಾನಪದ ಕ್ರೀಡೆ ಕಂಬಳದ ದೃಶ್ಯಗಳು. ನಗರದ ಜನರಿಗೂ ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದ ಬಗ್ಗೆ ಅರಿವು, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಮಂಗಳೂರಿನ ಕುಳೂರು ಬಳಿಯ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಕಂಬಳೋತ್ಸವನ್ನು ಏರ್ಪಡಿಸಲಾಗಿತ್ತು. ಕೃತಕವಾಗಿ ರೂಪಿಸಿದ ಕಂಬಳದ ಕರೆಯಲ್ಲಿ ಓಡಿದ ಕೋಣಗಳು ಜನರಲ್ಲಿ ಆಟದ ರಂಗನ್ನು ಮೂಡಿಸಿದವು.
ಸಾಮಾನ್ಯವಾಗಿ ಕಂಬಳ ಹಳ್ಳಿಗಳಲ್ಲಿ ಮಾತ್ರ ಎನ್ನುವಂತಿದ್ದವು. ಆದರೆ ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ರಾಮ-ಲಕ್ಷ್ಮಣ ಕಂಬಳೋತ್ಸವ ನಡೆಸಲಾಗುತ್ತಿದೆ. ಕ್ಯಾಪ್ಟನ್ ಬೃಜೇಶ್ ಚೌಟ ನೇತೃತ್ವದಲ್ಲಿ ಈ ಕಂಬಳ ನಡೆಯುತ್ತಿದೆ. ಹೀಗಾಗಿ ಮಣ್ಣಿನ ಆಟವನ್ನು ನೋಡಿ ನಗರದ ಜನ ಸಂಭ್ರಮ ಪಡುವಂತೆ ಇಲ್ಲಿ ಕಂಬಳವನ್ನು ಆಯೋಜಿಸಲಾಗಿತ್ತು.
ಇನ್ನು ಈ ಕಂಬಳ ಯಾವುದೇ ಕ್ರಿಕೆಟ್ ಆಟಕ್ಕೆ ಕಡಿಮೆ ಇಲ್ಲ. ಕ್ರಿಕೆಟ್‌ನಲ್ಲಿ ಸ್ಟಾರ್‌ಗಳೇ ಪ್ರಮುಖ ಆಕರ್ಷಣೆಯಾದರೆ, ಇಲ್ಲಿ ಮೂಕ ಪ್ರಾಣಿ ಕೋಣಗಳೇ ಪ್ರಮುಖ ಆಕರ್ಷಣೆ. ಪ್ರತಿ ಕೋಣದ ಮೇಲೂ ಸಾವಿರಾರು ರೂಪಾಯಿ ಬಾಜಿ ಕಟ್ಟುತ್ತಾರೆ ಕಂಬಳ ಪ್ರೇಮಿಗಳು. ಕ್ರಿಕೆಟ್‌ನಂತೆ ಇಲ್ಲಿಯೂ ಕೂಡಾ ಥರ್ಡ್ ಅಂಪೈರ್, ವೀಕ್ಷಕ ವಿವರಣೆ, ನುರಿತ ತೀರ್ಪುಗಾರರು ಇರುತ್ತಾರೆ. ಮೂಕ ಪ್ರಾಣಿಗಳನ್ನು ಪಳಗಿಸಿ ಶಿಸ್ತಿಗೆ ಒಡ್ಡಿಕೊಳ್ಳುವ ರೀತಿಯೇ ಸೂಪರ್. ಇನ್ನು ಮಂಗಳೂರು ಸಿಟಿ ಕಂಬಳದ ಈ ಬಾರಿಯ ವಿಶೇಷ ಅಂದರೆ ಕಂಬಳವನ್ನು ವೀಕ್ಷಿಸಲು ಅಮೆರಿಕದ ಪ್ರಜೆಯೊಬ್ಬರು ಸಹ ಬಂದಿದ್ದರು.

142 ಜೊತೆ ಕೋಣಗಳು ಪಾಲ್ಗೊಂಡಿದ್ದವು
ಮಂಗಳೂರು ರಾಮ-ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ಒಟ್ಟು 142 ಜೊತೆ ಕೋಣಗಳು ಭಾಗವಹಿಸಿದ್ದವು. ಒಟ್ಟು ಆರು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಕನೆ ಹಲಗೆಯಲ್ಲಿ 3 ಜೊತೆ, ಅಡ್ಡ ಹಲಗೆಯಲ್ಲಿ 8 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 27 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 66 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 27 ಜೊತೆ ಮತ್ತು ಹಗ್ಗ ಕಿರಿಯ ವಿಭಾಗದಲ್ಲಿ 21 ಜೊತೆ ಕೋಣಗಳು ಭಾಗವಹಿಸಿದ್ದವು.

ಶಾಸಕರ ಹೆಸರಿನಲ್ಲಿ ಕೋಣದ ಓಟ
ಈ ಬಾರಿ ವಿಶೇಷವಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ತಮ್ಮ ಹೆಸರಿನಲ್ಲಿ ಕೋಣವನ್ನು ಓಡಿಸಿದ್ದರು. ಹಿಂದೆ ಹಲವಾರು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದ ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿಯವರ ಕೋಣಗಳನ್ನು ಮಂಗಳೂರು ಕಂಬಳದಲ್ಲಿ ಶಾಸಕ ಭರತ್ ಶೆಟ್ಟಿಯವರ ಹೆಸರಿನಲ್ಲಿ ಓಡಿಸಲಾಗಿತ್ತು. ಕಂಬಳ ಕರೆಯಲ್ಲಿದ್ದ ಶಾಸಕ ಭರತ್ ಶೆಟ್ಟಿ ವಿಜಯ ಕ್ಷಣವನ್ನು ಸಂಗಡಿಗರನ್ನು ತಬ್ಬಿ ಸಂಭ್ರಮಿಸಿದರು. ಕೋಣಗಳನ್ನು ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಓಡಿಸಿದರು.

ಮಂಗಳೂರು ಕಂಬಳ ಫಲಿತಾಂಶ
ಆಧುನಿಕತೆಯ ನಡುವೆಯೂ ಕೃಷಿಕರ ಪಾಲಿನ ಮನೋರಂಜನೆಯಾಗಿ ಅದಕ್ಕೂ ಮಿಗಿಲಾಗಿ ಪ್ರತಿಷ್ಟೆಯ ಕ್ರೀಡೆಯಾಗಿ ಕಂಬಳ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಒಟ್ಟಿನಲ್ಲಿ ನಗರದಲ್ಲೂ ಈ ಕರಾವಳಿಯ ಜಾನಪದ ಕ್ರೀಡೆಯನ್ನು ಆಯೋಜಿಸುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ.
ಕಂಬಳ ಫಲಿತಾಂಶ; ಕನೆಹಲಗೆ (ನೀರು ನೋಡಿ ಬಹುಮಾನ)
ಪ್ರಥಮ : ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ದ್ವಿತೀಯ : ಬಾರ್ಕೂರು ಶಾಂತಾರಾಮ ಶೆಟ್ಟಿ
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಭರತ್ ನಾಯ್ಕ್
* ಅಡ್ಡ ಹಲಗೆ
* ಪ್ರಥಮ : ವಾಲ್ಪಾಡಿ ಹಾಲಾಜೆ ಲೂಯಿಸ್ ಲಾರೆನ್ಸ್ ಸಲ್ದಾನ
ಹಲಗೆ ಮುಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ
* ದ್ವಿತೀಯ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
* ಹಗ್ಗ ಹಿರಿಯ
ಪ್ರಥಮ : ಎಡ್ತರೆಗುತ್ತು ಡಾ.ವೈ ಭರತ್ ಶೆಟ್ಟಿ "ಎ"
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ : ಪದವು ಕಾನಡ್ಕ ಫ್ಲೇವಿ ಡಿಸೋಜ "ಎ"
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
Recommended Video

ಬಹುಮಾನ ಪಡೆದವರ ವಿವರ
* ಹಗ್ಗ ಕಿರಿಯ
ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್
ದ್ವಿತೀಯ: ಗುರುಪುರ ಕಾರಮೊಗರಗುತ್ತು ಯಶ್ ಜಗದೀಶ್ ಆಳ್ವ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
* ನೇಗಿಲು ಹಿರಿಯ
ಪ್ರಥಮ: ಬೋಳದಗುತ್ತು ಜಗದೀಶ್ ಶೆಟ್ಟಿ "ಎ"
ಓಡಿಸಿದವರು: ಮರೋಡಿ ಶ್ರೀಧರ್
ದ್ವಿತೀಯ: ಸಿದ್ಧಕಟ್ಟೆ ಪೋಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ "ಎ"
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ
* ನೇಗಿಲು ಕಿರಿಯ:
ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ
ಓಡಿಸಿದವರು: ಮರೋಡಿ ಶ್ರೀಧರ್
ದ್ವಿತೀಯ: ಪಡೀಲು ಕವತ್ತಾರುಗುತ್ತು ದಿನಕರ ಜಯರಾಮ್ ಶೆಟ್ಟಿ
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್












Click it and Unblock the Notifications