ಬೆಂಗಳೂರಿನಲ್ಲಿ ಕಂಬಳ, ಮಂಗಳೂರಿನಿಂದಲೇ ಕೋಣಗಳಿಗೆ ಆಹಾರ, ನೀರು ಸರಬರಾಜು, ಕಾರಣ ತಿಳಿಯಿರಿ
ಬೆಂಗಳೂರು, ಅಕ್ಟೋಬರ್, 01: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಕಂಬಳ ಆಯೋಜನೆಗೊಳ್ಳುತ್ತಿದೆ. ನವೆಂಬರ್ 25-26ರಂದು ನಡೆಯುವ ಕಂಬಳದಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ 100 ಅಧಿಕ ಜೋಡಿ ಕೋಣಗಳು ಬೆಂಗಳೂರಿಗೆ ತೆರಳಲಿದೆ. ಮಂಗಳೂರಿನಿಂದ ಮೆರವಣಿಗೆ ಮೂಲಕ ಕೋಣಗಳು ಬೆಂಗಳೂರಿಗೆ ತೆರಳಲಿದೆ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ ಸಂಬಂಧಿಸಿದಂತೆ ಕಂಬಳ ಕೋಣಗಳ ಯಜಮಾನರ ಸಭೆ ನಡೆದ ಬಳಿಕ ಮಾತನಾಡಿದ ಅವರು, ನವೆಂಬರ್ 23ರಂದು ಮೆರವಣಿಗೆಯಲ್ಲಿ ಕೋಣಗಳನ್ನು ಲಾರಿಯಲ್ಲಿ ಬೆಂಗಳೂರಿಗೆ ಕೊಂಡೊಯ್ಯೊಲಾಗುತ್ತದೆ. ಹಾಸನದಲ್ಲಿ ಎರಡು ಗಂಟೆಗಳ ಕಾಲ ಕೋಣಗಳಿಗೆ ವಿಶ್ರಾಂತಿ ಮತ್ತು ಆಹಾರ ನೀಡಲಾತ್ತದೆ.
ಬಳಿಕ ಚನ್ನರಾಯಪಟ್ಟಣ, ತುಮಕೂರುಗಳಲ್ಲಿ ವಿಶ್ರಾಂತಿ ಪಡೆದು ಬೆಂಗಳೂರಿಗೆ ಹೋಗಲಾಗುವುದು. ಹಾಸನ, ಚನ್ನರಾಯಪಟ್ಟಣ ಮತ್ತು ತುಮಕೂರುಗಳಲ್ಲಿ ಕರಾವಳಿಯ ಜನರು ಸೇರಿದಂತೆ ಸ್ಥಳೀಯರು ಕೋಣಗಳಿಗೆ ಸ್ವಾಗತಿಸಲಿದ್ದಾರೆ. ಈ ಕೋಣಗಳನ್ನು ಕೊಂಡೊಯ್ಯುವಾಗ ಪಶು ವೈದ್ಯಾಧಿಕಾರಿಗಳು ಮತ್ತು ಪಶು ಆ್ಯಂಬುಲೆನ್ಸ್‌ಗಳು ಜೊತೆಗಿರಲಿವೆ ಎಂದು ಹೇಳಿದ್ದಾರೆ.
125 ಜೋಡಿ ಕೋಣಗಳಿಗೆ ಬೆಂಗಳೂರಿನಲ್ಲಿ ಟೆಂಟ್ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಕೋಣಗಳ ಯಜಮಾನರಿಗೆ ಕೊಠಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಕೋಣಗಳಿಗೆ ನೀರಿನ ವ್ಯತ್ಯಾಸವಾಗಬಾರದೆಂಬ ನೆಲೆಯಲ್ಲಿ ಮಂಗಳೂರಿನಿಂದಲೇ 5 ಟ್ಯಾಂಕರ್ ನೀರನ್ನು ಅಲ್ಲಿಗೆ ಕೊಂಡೊಯ್ಯಲಾಗುತ್ತದೆ. ಕೋಣಗಳಿಗೆ ಬೈಹುಲ್ಲು, ಹುರುಳಿಯನ್ನು ಇಲ್ಲಿಂದಲೇ ಕೊಂಡೊಯ್ದು ಅಲ್ಲಿಯೆ ತಯಾರಿಸಿ ಕೊಡಲಾಗುತ್ತದೆ. ಈ ವರ್ಷ ಆರಂಭಿಸಲಾದ ಕಂಬಳಕ್ಕೆ ಉತ್ತಮ ಸ್ಪಂದನೆ ಸಿಕ್ಕಿದರೆ ಇದನ್ನು ಪ್ರತೀ ವರ್ಷ ಮುಂದುವರಿಸಲಾಗುತ್ತದೆ ಎಂದು ಅಶೋಕ್ ರೈ ಹೇಳಿದರು.
ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದೆ. ಸ್ಯಾಂಡಲ್‌ವುಡ್, ಬಾಲಿವುಡ್ ಸ್ಟಾರ್ ನಟ-ನಟಿಯರು ಕಂಬಳಕ್ಕೆ ಬರುವ ನಿರೀಕ್ಷೆಯಿದೆ. ಸೂಪರ್ ಸ್ಟಾರ್ ರಜನಿಕಾಂತ್, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಸಿಎಂ, ಡಿಸಿಎಂ ಸೇರಿದಂತೆ ಎಲ್ಲಾ ಪಕ್ಷಗಳ ಪ್ರಮುಖರು ಭಾಗಿಯಾಗಲಿದ್ದಾರೆ.

ಈ ಕಂಬಳದಲ್ಲಿ 7 ರಿಂದ 8ಲಕ್ಷ ಜನ ಬರುವ ನಿರೀಕ್ಷೆಯಿದೆ. 2000 ಮಂದಿ ವಿಐಪಿಗಳಿಗೆ ಆಸನ ವ್ಯವಸ್ಥೆ ಮಾಡಲಾಗುತ್ತದೆ. 15 ಸಾವಿರ ಮಂದಿಗೆ ಗ್ಯಾಲರಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಒಂದೆಡೆ ಕಂಬಳ ನಡೆಯುತ್ತಿದ್ದರೆ, ಮತ್ತೊಂದೆಡೆ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನೂರಕ್ಕೂ ಅಧಿಕ ಮಳಿಗೆಗಳಲ್ಲಿ ಕರಾವಯಳಿಯ ಆಹಾರ ಮಳಿಗೆಗಳನ್ನು ಅಳವಡಿಸಲಾಗುತ್ತದೆ ಎಂದು ಹೇಳಿದರು.
ಕಂಬಳವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಲು ಬೆಂಗಳೂರು ಕಂಬಳವನ್ನು ಕರಾವಳಿಯಲ್ಲಿ ನಡೆಯುವ ಕಂಬಳದಂತೆ ಆಯೋಜಿಸಲಾಗುತ್ತದೆ. ಕಂಬಳಕ್ಕೆ ಸಂಬಂಧಿಸಿದಂತೆ ನೀತಿ ನಿಯಮಗಳನ್ನು, ಕಾನೂನುಗಳನ್ನು, ಸುಪ್ರೀಂ ಕೋರ್ಟ್ ಆದೇಶಗಳನ್ನು ಪಾಲಿಸಿಕೊಂಡು ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 5-6 ಕೋಟಿ ವೆಚ್ಚದಲ್ಲಿ ಕಂಬಳ ಮಾಡಲಾಗುತ್ತದೆ ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ.












Click it and Unblock the Notifications