ಕಂಬಳ ಉಳಿಸಲು ಮಂಗಳೂರಲ್ಲಿ ಬೃಹತ್ ಹೋರಾಟಕ್ಕೆ ನಿರ್ಧಾರ!
ಮಂಗಳೂರು, ಜನವರಿ 22 : ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆಸಲು ಸಿದ್ದತೆ ನಡೆಯುತ್ತಿದ್ದಂತೆ ಇತ್ತ ಕರಾವಳಿ ಜಿಲ್ಲೆಯ ಕಂಬಳ ಸಮಿತಿಗಳು ಕಂಬಳ ನಿಷೇಧ ಹಿಂಪಡೆಯುವಂತೆ ಒತ್ತಾಯಿಸಿ ಬೃಹತ್ ಹೋರಾಟ ಮಾಡಲು ಸಜ್ಜಾಗಿವೆ.
ಈ ಕುರಿತು ಮಾತನಾಡಿದ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ 'ಮುಂದಿನ ಬುಧವಾರ ಅಥವಾ ಗುರುವಾರದೊಳಗಾಗಿ ಮಂಗಳೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿ ದೇಶದ ಹಾಗೂ ರಾಜಕಾರಣಿಗಳ ಗಮನ ಸೆಳೆಯಲಾಗುವುದು.[ಟ್ವಿಟರ್ ನಲ್ಲಿ ಕಂಬಳಕ್ಕಾಗಿ ಕನ್ನಡಿಗರು ಏನಂದ್ರು?]
ಉಡುಪಿ ಹಾಗೂ ಮಂಗಳೂರಿನ ಕಂಬಳ ಅಭಿಮಾನಿಗಳ ಸಹಿತ 15ರಿಂದ 200 ಜತೆ ಕಂಬಳದ ಕೋಣಗಳೂ ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದೆ ಎಂದರು.

ಜಲ್ಲಿಕಟ್ಟು ನಡೆಸಲು ಅನುಮತಿ ದೊರೆತಿರುವಾಗ ಕಂಬಳಕ್ಕೂ ಅನುಮತಿ ದೊರೆಯಬೇಕು. ಇಲ್ಲಿ ಹಿಂಸೆಗೆ ಆಸ್ಪದವಿಲ್ಲ. ಈ ಕ್ರೀಡೆ ನಮ್ಮ ಸಂಸ್ಕ್ರತಿಯ ಒಂದು ಭಾಗ' ಎಂದು ಅವರು ಹೇಳಿದರು.[ಟ್ವಿಟರ್ ನಲ್ಲಿ ಕಂಬಳಕ್ಕಾಗಿ ಕನ್ನಡಿಗರು ಏನಂದ್ರು?]
ಜಲ್ಲಿಕಟ್ಟು ಸಂಬಂಧ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪೆಟಾ ಸಂಸ್ಥೆ ಸಲ್ಲಿಸಿದ ಅಪೀಲ್ ಅನ್ವಯ ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಹೈಕೋರ್ಟ್ ವಿಭಾಗೀಯ ಪೀಠವೊಂದು ತನ್ನ ಮಧ್ಯಂತರ ಆದೇಶವೊಂದರಲ್ಲಿ ಕಂಬಳಕ್ಕೆ ತಡೆ ಹೇರಿತ್ತು.
ಈ ತಡೆಯಾಜ್ಞೆ ತೆರವುಗೊಳಿಸುವಂತೆ ಕಂಬಳ ಸಮಿತಿಗಳು ಮಧ್ಯಂತರ ಅಪೀಲು ಸಲ್ಲಿಸಿದ್ದರೂ ಹೈಕೋರ್ಟಿನ ವಿಭಾಗೀಯ ಪೀಠ ಈ ಪ್ರಕರಣದ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿದೆ.
ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕಂಬಳ ಸಮಿತಿಯ ಸದಸ್ಯರೊಬ್ಬರು ನಮಗೆ ಕಾನೂನು ಹೋರಾಟದಲ್ಲಿ ಜಯ ಸಿಗುವ ಭರವಸೆ ಇದೆ. ಕಂಬಳ ಹಾಗೂ ಜಲ್ಲಿಕಟ್ಟು ನಡುವೆ ಬಹಳಷ್ಟು ವ್ಯತ್ಯಾಸವಿದೆ ಎಂದರು.












Click it and Unblock the Notifications