ಶೃಂಗೇರಿ ಶೂಟೌಟ್, ಎಎನ್ಎಫ್ ಸಿಬ್ಬಂದಿಗೆ ಬೇಲ್ ಸಿಕ್ಕಿಲ್ಲ
ಚಿಕ್ಕಮಗಳೂರು, ಮೇ 19: ಶೃಂಗೇರಿ ತಾಲುಕು ತನಿಕೋಡು ಚೆಕ್‌ಪೋಸ್ಟ್ ನಲ್ಲಿ ಅಮಾಯಕನನ್ನು ಗುಂಡಿಕ್ಕಿ ಕೊಂದಿರುವ ಆರೋಪ ಹೊತ್ತಿರುವ ಎಎನ್‌ಎಫ್ ಪಡೆಯ ಸಿಬ್ಬಂದಿ ನವೀನ್ ನಾಯಕ್ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
ಜಾಮೀನು ಅರ್ಜಿಯನ್ನು ಇಲ್ಲಿನ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ಸೇಷನ್ ನ್ಯಾಯಾಲಯ ತಿರಸ್ಕರಿಸಿದೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತನಿಕೋಡು ಅರಣ್ಯ ಚೆಕ್ ಪೋಸ್ಟ್ ಬಳಿ ನಡೆದ ಶೂಟೌಟ್ ಪ್ರಕರಣದ ಪ್ರಥಮ ತನಿಖಾ ವರದಿ ಇತ್ತೀಚೆಗೆ ಹೊರಬಿದಿತ್ತು. 23 ವರ್ಷದ ಮಹಮ್ಮದ್ ಕಬೀರ್ ಎಂಬ ಕೃಷ್ಣಾಪುರದ ಯುವಕನ ಹತ್ಯೆ ವಿವರಗಳು ಈಗ ಅಧಿಕೃತವಾಗಿ ಲಭ್ಯವಾಗಿತ್ತು. ಎಎನ್ ಎಫ್ ಸಿಬ್ಬಂದಿ ಉದ್ದೇಶ ಪೂರ್ವಕವಾಗಿ ಹತ್ಯೆ ಮಾಡಿಲ್ಲ ಎಂಬುದು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಆದರೂ, ನವೀನ್ ನಾಯಕ್ ಬೇಲ್ ಸಿಗುವುದು ಕಷ್ಟವಾಗಿದೆ.[ಶೂಟೌಟ್ ತನಿಖಾ ವರದಿ]

ಏ.19ರಂದು ತೀರ್ಥಹಳ್ಳಿಯಿಂದ ಮಂಗಳೂರಿಗೆ ಪಿಕಪ್ ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದ ಐದು ಮಂದಿಯ ತಂಡದಲ್ಲಿ ಕಬೀರ್ ಇದ್ದ. ಬೆಳಗಿನ ಜಾವ 3:30ರ ಸುಮಾರಿನಲ್ಲಿ ಈ ತಂಡ ಶೃಂಗೇರಿ ತಾಲೂಕಿನ ತನಿಕೋಡು ಚೆಕ್‌ಪೋಸ್ಟ್ ಬಳಿ ಬಂದು ಅರಣ್ಯ ತನಿಖಾ ಠಾಣೆಯ ಎದುರು ವಾಹನವನ್ನು ನಿಲ್ಲಿಸಿ ತಪಾಸಣೆಗೆ ಒಳಪಡುತ್ತಿದ್ದಾಗ ನಕ್ಸಲ್ ಶಂಕೆ ಮೇರೆಗೆ ಎಎನ್‌ಎಫ್ ಪಡೆಯ ಸಿಬ್ಬಂದಿ ನವೀನ್ ನಾಯಕ್ ಗುಂಡು ಹಾರಿಸಿದ್ದ ಪರಿಣಾಮ ಕಬೀರ್ ಸ್ಥಳದಲ್ಲಿಯೇ ಮೃತಪಟ್ಟಿದ್ದ.
ಘಟನೆ ಸಂಬಂಧ ಏ.23ರಂದು ಸುರತ್ಕಲ್ ನಿವಾಸಿ ಉಮರ್ ಫಾರೂಕ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಎಎನ್‌ಎಫ್ ಪಡೆಯ ಸಿಬ್ಬಂದಿ ನವೀನ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಸರಕಾರ ತನಿಖೆಗೆ ನೇಮಿಸಿದ ಸಿಐಡಿ ಅಧಿಕಾರಿಗಳು ಆರೋಪಿಯನ್ನು ಏ.25ರಂದು ಬಂಧಿಸಿ ತನಿಖೆ ಆರಂಭಿಸಿದ್ದರು. ಘಟನೆಗೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಎಎನ್‌ಎಫ್ ಪಡೆಯ ಸಿಬ್ಬಂದಿ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯನ್ನು ನಿರಾಕರಿಸಿದೆ.
ನಕ್ಸಲ್ ನಿಗ್ರಹ ಪಡೆಯ ಪೇದೆ ನವೀನ್ ಜಿ ನಾಯಕ್ ಅವರು 2012ರಲ್ಲಿ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಪಡೆದ ಸಮರ್ಥ ಯೋಧ. ನಕ್ಸಲ್ ಎನ್ ಕೌಂಟರ್ ಮಾಡುವುದರಲ್ಲಿ ನಿಪುಣ. ಆದರೆ, ಕಬೀರ್ ಶೂಟೌಟ್ ನಿಂದಾಗಿ ಬಂಧಿಸಲ್ಪಟ್ಟು ನ್ಯಾಯಾಂಗ ಬಂಧನ ಅನುಭವಿಸುತ್ತಿದ್ದಾರೆ. ಸಿಐಡಿ ತಂಡ ತನಿಖೆ ಮುಂದುವರೆಸಿದೆ.
ಶಾಸಕ ಸಿಟಿ ರವಿ, ಸುನಿಲ್ ಕುಮಾರ್ ಅವರು ಕಬೀರ್ ಪರ ಸಿದ್ದರಾಮಯ್ಯ ಸರ್ಕಾರ ನಿಂತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರಿಗೂ ದೂರು ನೀಡಲು ನಿರ್ಧರಿಸಿದ್ದಾರೆ. ಅತ್ತ, ಯುಟಿ ಖಾದರ್, ಜನಾರ್ದನ ಪೂಜಾರಿ, ಮೊಯಿದ್ದೀನ್ ಬಾವಾ ಅವರು ಕಬೀರ್ ಸಾವಿಗೆ ನ್ಯಾಯ ದೊರೆಕಿಸಿಕೊಡಲು ಪಣತೊಟ್ಟಿದ್ದಾರೆ. ಒಟ್ಟಾರೆ ರಾಜಕೀಯ ನಾಯಕರ ಪರ ವಿರೋಧದಿಂದಾಗಿ ಪೇದೆ ನ್ಯಾಯ ಸದ್ಯಕ್ಕಂತೂ ಸಿಗುತ್ತಿಲ್ಲ.












Click it and Unblock the Notifications