ಸಾರ್ವಜನಿಕ ವೇದಿಕೆಯಲ್ಲಿ ಬಿಕ್ಕಿಬಿಕ್ಕಿ ಅತ್ತ ಜನಾರ್ದನ ಪೂಜಾರಿ
Recommended Video

ಮಂಗಳೂರು, ಡಿಸೆಂಬರ್ 29 : ರಾಜ್ಯ ಅರಣ್ಯ ಸಚಿವ ರಮಾನಾಥ ರೈ ತಮ್ಮ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ವಿಚಾರದ ಬಗ್ಗೆ ತಿಳಿದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಕ್ಕಿಬಿಕ್ಕಿ ಅತ್ತ ಪ್ರಸಂಗ ನಡೆದಿದೆ.
ಗುರುವಾರ ಮಂಗಳೂರಿನ ಗರೋಡಿ ಶ್ರೀ ಬ್ರಹ್ಮಬೈದರ್ಕಳ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನಾರ್ದನ ಪೂಜಾರಿ, ಸಚಿವ ರಮಾನಾಥ ರೈ ತನ್ನ ವಿರುದ್ಧ ಅವಾಚ್ಯ ಶಬ್ದಗಳಿಂದ ಸೂ.. ಮಗ ಮತ್ತು ರ.. ಮಗ ಎಂದು ನಿಂದಿಸಿದ್ದಾರೆಂದು ಪ್ರಸ್ತಾಪಿಸಿ ಸಾರ್ವಜನಿಕ ಕಾರ್ಯಕ್ರಮದ ವೇದಿಕೆಯ ಮೇಲೆಯೇ ಗಳಗಳನೆ ಅತ್ತು ಬಿಟ್ಟರು.

ಇದು ಸತ್ಯ ನ್ಯಾಯಕ್ಕಾಗಿ ಹೋರಾಡಿದ ಕೋಟಿ ಚೆನ್ನಯರ ಗರೋಡಿ. ನನ್ನ ತಾಯಿ ಚೆನ್ನಮ್ಮ. ತಾಯಿಯ ತಾಯಿ ದೇಯಿ ಬೈದೆತಿ. ಕೋಟಿ ಚೆನ್ನಯರ ತಾಯಿಯೂ ದೇಯಿ ಬೈದೆತಿ. ಹಾಗಾದ್ರೆ ನನ್ನ ತಾಯಿ ರಮಾನಾಥ ರೈ ಹೇಳಿದಂತೆ ಸೂಳೆಯೋ ಎಂದು ತೀರಾ ಗದ್ಗದಿತರಾಗಿ ಕಣ್ಣೀರಿಟ್ಟರು.

ಸಾವಿರಾರು ಜನ ಸೇರಿದ್ದ ಸಭೆಯಲ್ಲಿ 80 ವರ್ಷದ ಹಿರಿಯರಾದ ಜನಾರ್ದನ ಪೂಜಾರಿಯವರು ಅತ್ತು ಕರೆದಾಗ, ಸಭೆಯಲ್ಲಿದ್ದ ಎಲ್ಲರೂ ಕಣ್ಣೀರಾದರು. ಮಂಗಳೂರು ಮೇಯರ್ ಕವಿತಾ ಸನಿಲ್, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಇತ್ತೀಚೆಗೆ ಮಂಗಳೂರಿನ ಸುರತ್ಕಲ್ ನಲ್ಲಿ ನಡೆದ ಮದುವೆ ಕಾರ್ಯಕ್ರಮ ಒಂದರಲ್ಲಿ ಸಚಿವ ರಮಾನಾಥ ರೈ, ಪೂಜಾರಿಯವರನ್ನು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದರು ಎಂದು ಹೇಳಲಾಗಿದೆ. ರೈ ಅವರ ಈ ವರ್ತನೆಗೆ ಕಾಂಗ್ರೆಸ್ಸಿಗರು ರಮಾನಾಥ ರೈ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications