ಮಂಗಳೂರಿನಲ್ಲೊಂದು ಅಪೂರ್ವ ಐದು ತಲೆಮಾರು
ಮಂಗಳೂರು, ಜು.28: ಇಂದಿನ ಆಧುನಿಕ ಸಮಾಜದಲ್ಲಿ ಐದು ತಲೆಮಾರಿನ ಕುಟುಂಬವನ್ನು ಕಾಣುವುದು ಬಹಳಷ್ಟು ಅಪರೂಪ. ಆದರೆ ಮಂಗಳೂರಿನ ಅಡ್ಯಾರು ನಡಿಗುತ್ತುವಿನ ಕುಟುಂಬದಲ್ಲಿ ಐದು ತಲೆಮಾರಿನ ಕುಟುಂಬನ್ನು ಕಾಣಬಹುದು.
ಅಡ್ಯಾರು ನಡಿಗುತ್ತುವಿನಲ್ಲಿ ಐದು ತಲೆಮಾರುಗಳ ಮಿಲನದ ಸಂಭ್ರಮದ ಕ್ಷಣವೊಂದು ಭಾನುವಾರ ನಡೆಯಿತು. ಅರ್ಕುಳ ಪೆಲಪಾಡಿಯ ಗುಲಾಬಿ ಶೆಟ್ಟಿಯವರು ತನ್ನ ಮೊಮ್ಮಗಳ ಮೊಮ್ಮಗಳನ್ನು ತೊಟ್ಟಿಲಲ್ಲಿ ಹಾಕಿ ಸಂಭ್ರಮಿಸಿದರು.
ಈ ಕುಟುಂಬವು ಮೂಲತಃ ಕುತ್ತೆತ್ತೂರು ಕೇಂಞ ಮನೆತನದ್ದಾಗಿತ್ತು ಏಳು ತಲೆಮಾರುಗಳ ಹೆಸರುಗಳು ಲಭ್ಯವಿದೆ. ಕಟ್ಟಿ ಯಾನೆ ಕೊರಪೊಳು ಎಂಬವರು ಹಿಂದಿನ ಏಳನೆಯ ತಲೆಮಾರಿನವರಾಗಿದ್ದಾರೆ. ಇವರ ಮಗಳು ರುಕ್ಕು ಶೆಡ್ತಿಯವರು ಐದನೇ ತಲೆಮಾರು ನೋಡುವ ಭಾಗ್ಯವನ್ನು ಹೊಂದಿದ್ದರು. ರುಕ್ಕು ಶೆಡ್ತಿಯವರು ಮೂಲ ಮನೆ ಕುತ್ತೆತ್ತೂರು ಕೇಂಞದಲ್ಲಿ ವಾಸವಿದ್ದರು.

ಇವರ ಮಗಳು ಗುಲಾಬಿ ಶೆಡ್ತಿಯವರನ್ನು ಅರ್ಕುಳ ಪೆಲಪಾಡಿ ಮನೆಯ ಸೇಸಣ್ಣ ಶೆಟ್ಟಿಯವರಿಗೆ ಮದುವೆ ಮಾಡಿಕೊಡಲಾಗಿತ್ತು. ಗುಲಾಬಿ ಶೆಡ್ತಿಯವರ ಪುತ್ರಿ ಅಂಬಾವತಿಯವರು ತಿಮ್ಮಪ್ಪ ಶೆಟ್ಟಿಯವರನ್ನು ಮದುವೆಯಾದ ನಂತರ ಅಡ್ಯಾರು ನಡಿಗುತ್ತು ಮನೆ ಸೇರಿದ್ದರು.
ಅಂಬಾವತಿಯವರ ಮಗಳು ಶರ್ಮಿಳಾರವರು ಕಡೇಶಿವಾಲಯದ ಅಮೈ ಗ್ರಾಮದ ನಾರಾಯಣ ಶೆಟ್ಟಿಯವರನ್ನು ಮದುವೆಯಾದ ನಂತರ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ವಾಸವಿದ್ದರು. ಶರ್ಮಿಳಾರ ಪುತ್ರಿ ಪ್ರೀತಿಯವರು ಶಿಬರೂರು ಕೋರ‍್ಯಾರು ಮನೆ ವಿನೀತ್ ಶೆಟ್ಟಿಯವರ ಮನೆ ತುಂಬಿದ್ದರು.
ಪ್ರೀತಿ ನೀರುಮಾರ್ಗದ ನವಚೇತನಾ ವಿದ್ಯಾಸಂಸ್ಥೆಯ ಪ್ರಾಂಶುಪಾಲೆಯಾಗಿಗದ್ದು ಈಗ ಇವರಿಗೆ ಹೆಣ್ಣು ಮಗುವಾಗಿದೆ. ಇವರ ಮುತ್ತಜ್ಜಿ ಐದು ತಲೆಮಾರುಗಳನ್ನು ನೋಡಿದ ಸಂಭ್ರಮದಲ್ಲಿದ್ದಾರೆ. ಮಗುವಿಗೆ ಪ್ರಣ್ವಿ ಎಂದು ಹೆಸರಿಡಲಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಐದು ತಲೆಮಾರಿನ ಸಂಭ್ರಮ ಅನುಭವಿಸಿದ ಈ ಕುಟುಂಬ ಈತ ಮತ್ತೊಮ್ಮೆ ಐದು ತಲೆಮಾರುಗಳ ಸಂತಸದಲ್ಲಿದೆ.













Click it and Unblock the Notifications