ನಾನು ಮತ್ತೆ ಅಫ್ಘನ್‌ಗೆ ಹೋಗಲ್ಲ: ಭಾರತೀಯ ವಾಯುಸೇನೆಯಿಂದ ರಕ್ಷಣೆಗೊಳಗಾದ ಕನ್ನಡಿಗನ ಮಾತು
ಮಂಗಳೂರು, ಆಗಸ್ಟ್ 19: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ. ಅಫ್ಘನ್‌ನಲ್ಲಿ ಸಿಲುಕಿದ ಭಾರತೀಯರನ್ನು ಭಾರತೀಯ ವಾಯುಸೇನೆ ಏರ್‌ಲಿಫ್ಟ್ ಮಾಡುತ್ತಿದೆ.
ಯುದ್ಧೋಪಾದಿಯಲ್ಲಿ ಅಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರನ್ನು ಮರಳಿ ಭಾರತಕ್ಕೆ ಕರೆ ತರುವ ಕೆಲಸವನ್ನು ಭಾರತೀಯ ವಾಯುಸೇನೆ ಮಾಡುತ್ತಿದೆ. ಕಾಬೂಲ್‌ನಿಂದ 180 ಭಾರತೀಯರನ್ನು ಭಾರತೀಯ ವಾಯುಸೇನೆ ಏರ್‌ಲಿಫ್ಟ್ ಮಾಡಿದ್ದು, ಕಾಬೂಲ್‌ನ ಸೇನಾ ಆಸ್ಪತ್ರೆಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದ, ಮಂಗಳೂರು ನಗರ ಹೊರವಲಯದ ಉಳ್ಳಾಲ ಸಮೀಪದ ಉಚ್ಚಿಲ ನಿವಾಸಿ ಮೆಲ್ವಿನ್ ಮೆಂತೇರೋರನ್ನೂ ರಕ್ಷಣೆ ಮಾಡಲಾಗಿದೆ.
ಅಫ್ಘಾನಿಸ್ತಾನದಲ್ಲಿ ಸಿಲುಕಿ ಹಾಕಿಕೊಂಡಿದ್ದ ಭಾರತೀಯರನ್ನು ಕತಾರ್, ಲಂಡನ್ ಹಾಗೂ ನಾರ್ವೇ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಭಾರತದ ವಾಯುಸೇನೆಯ ಸೀ-17 ಏರೋಸ್ಪೇಸ್ ವಿಮಾನದ ಮೂಲಕ 180 ಭಾರತೀಯರನ್ನು ಗುಜರಾತ್ ಜಾಮ್‌ನಗರ ಬೇಸ್‌ಗೆ ಯಶಸ್ವಿಯಾಗಿ ಕರೆ ತರಲಾಗಿದೆ. ಮೆಲ್ವಿನ್ ಮೆಂತೇರೋ ಕೂಡಾ ಈ ವಿಮಾನದಲ್ಲಿ ಬಂದಿದ್ದು, ಗುಜರಾತ್‌ನಿಂದ ದೆಹಲಿಗೆ ತಲುಪಿ ಆಗಸ್ಟ್ 18ರ ಮಧ್ಯಾಹ್ನ ಮಂಗಳೂರಿಗೆ ತಲುಪಿದ್ದಾರೆ.

ಸೇನಾ ಆಸ್ಪತ್ರೆಯಲ್ಲಿ ಇಲೆಕ್ಟ್ರೀಷಿಯನ್ ಆಗಿ ಕೆಲಸ
ಕಳೆದ ಹತ್ತು ವರ್ಷಗಳಿಂದ ಮೆಲ್ವಿನ್ ಮೆಂತೇರೋ ಅಫ್ಘಾನಿಸ್ತಾನದ ಸೇನಾ ಆಸ್ಪತ್ರೆಯಲ್ಲಿ ಇಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಆರು ತಿಂಗಳ ಹಿಂದೆಯಷ್ಟೇ ರಜೆಯಲ್ಲಿ ಭಾರತಕ್ಕೆ ಬಂದು ಮರಳಿ ಅಫ್ಘಾನಿಸ್ತಾನಕ್ಕೆ ಹೋಗಿದ್ದರು. ಕಳೆದ ಒಂದು ವಾರದಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಕಾಬೂಲ್ ಸೇರಿದಂತೆ ಎಲ್ಲಾ ನಗರಗಳನ್ನು ವಶಪಡಿಸಿಕೊಳ್ಳುತ್ತಿದ್ದು, ಮೆಲ್ವಿನ್ ಮೆಂತೇರೋ ಸೇರಿದಂತೆ ಹಲವರಿಗೆ ಜೀವ ಭಯ ಕಾಡಿತ್ತು.
ಆದರೆ ಸೇನಾ ಆಸ್ಪತ್ರೆಗೆ ಅಮೆರಿಕಾ ಸೇನೆ ಭದ್ರತೆ ನೀಡುತ್ತಿದ್ದರಿಂದ ಮತ್ತು ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇನಾ ಆಸ್ಪತ್ರೆಯ ಬಳಿಯೇ ಇದ್ದರಿಂದ ತಾಲಿಬಾನ್ ಉಗ್ರರು ಮೆಲ್ವಿನ್ ಇದ್ದ ಸ್ಥಳಕ್ಕೆ ನುಗ್ಗಲು ಸಾಧ್ಯವಾಗಿಲ್ಲ.

ವಿಮಾನ ನಿಲ್ದಾಣದಲ್ಲೇ ಅನ್ನ, ಆಹಾರ ಇಲ್ಲದೇ ಕಾಲ ಕಳೆದರು
ಆದರೆ ಅಫ್ಘಾನಿಸ್ತಾನದ ಪ್ರಜೆಗಳು ತಮ್ಮ ಊರು ತೊರೆಯಲು ನಿರ್ಧಾರ ಮಾಡಿದ್ದರಿಂದ ವಿಮಾನ ನಿಲ್ದಾಣಗಳಿಗೆ ಮುತ್ತಿಗೆ ಹಾಕಿದ್ದಾರೆ. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿ ಜನರ ಜಮಾವಣೆ ಹೆಚ್ಚಾಗುತ್ತಿದ್ದ ಕಾರಣ ವಿಮಾನ ರಾತ್ರಿ ಹೊತ್ತು ಮಾತ್ರ ಲ್ಯಾಂಡ್ ಆಗುತ್ತಿದ್ದವು. ಈ ಹಿನ್ನಲೆಯಲ್ಲಿ ಎರಡು ದಿನ ಮೆಲ್ವಿನ್ ಮೆಂತೇರೋ ಮತ್ತು ಸಂಗಡಿಗರು ವಿಮಾನ ನಿಲ್ದಾಣದಲ್ಲೇ ಅನ್ನ, ಆಹಾರ ಇಲ್ಲದೇ ಕಾಲ ಕಳೆದಿದ್ದಾರೆ.
"ವಿಮಾನ ನಿಲ್ದಾಣದಲ್ಲಿ ಸಿಲುಕಿದ ಭಾರತೀಯರನ್ನು ಸೇನಾ ವಿಮಾನಗಳಲ್ಲಿ ಭಾರತ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಕಳುಹಿಸಿಕೊಡಲಾಗಿದೆ. ಲಂಡನ್, ನಾರ್ವೆ, ದುಬೈ ದೇಶಗಳಿಗೆ ಕಳುಹಿಸಿಕೊಟ್ಟು ಅಲ್ಲಿ ಕ್ವಾರೆಂಟೈನ್ ವ್ಯವಸ್ಥೆ ಮಾಡಲಾಗಿದೆ," ಅಂತಾ ಮೆಲ್ವಿನ್ ಮೆಂತೇರೋ ಅಭಿಪ್ರಾಯಪಟ್ಟಿದ್ದಾರೆ.

ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಮತ್ತೆ ಹೋಗಲ್ಲ
"ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಮತ್ತೆ ಅಫ್ಘಾನಿಸ್ತಾನಕ್ಕೆ ಹೋಗುವುದಿಲ್ಲ ಅಂತಾ ಮೆಲ್ವಿನ್ ಹೇಳಿದ್ದಾರೆ. ತಾಲಿಬಾನ್‌ಗಳು ಪರಮ ಕ್ರೂರಿಗಳಾಗಿದ್ದು, ಅಲ್ಲಿ ಹೋದರೆ ಮತ್ತೆ ನೆಮ್ಮದಿಯಿಂದ ಇರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ತಾಲಿಬಾನ್ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದರೆ ಮತ್ತೆ ಅಲ್ಲಿ ಹೋಗುವುದಿಲ್ಲ," ಅನ್ನೋದು ಮೆಲ್ವಿನ್ ಅಭಿಪ್ರಾಯ.
"ಆದರೆ, ಅಮೆರಿಕಾ ಸೇನೆ ಮತ್ತೆ ಅಧಿಕಾರ ಸ್ಥಾಪಿಸಿದರೆ, ಕರ್ತವ್ಯಕ್ಕೆ ಕರೆದರೆ ಮಾತ್ರ ಹೋಗುವುದಾಗಿ ಮೆಲ್ವಿನ್ ಹೇಳಿದ್ದಾರೆ. ಆದರೆ ಅಮೆರಿಕಾ ಈಗಾಗಲೇ ತನ್ನ ಬಲವನ್ನು ಅಫ್ಘಾನಿಸ್ತಾನದಿಂದ ಹಿಂಪಡೆದಿದ್ದರಿಂದ ಮತ್ತೆ ಅಮೆರಿಕಾ ಅಫ್ಘಾನಿಸ್ತಾನವನ್ನು ಪ್ರಾಬಲ್ಯಕ್ಕೆ ಪಡೆದುಕೊಳ್ಳುವುದು ಕಷ್ಟ," ಅನ್ನುವುದು ಮೆಲ್ವಿನ್ ಅಭಿಪ್ರಾಯವಾಗಿದೆ.

ಭಾರತ ಸರ್ಕಾರ ರಕ್ಷಣೆಗೆ ಮುಂದಾಗಿದೆ
ಇನ್ನು ತನ್ನ ಪತಿ ಸುರಕ್ಷಿತವಾಗಿ ಮರಳಿ ಮನೆಗೆ ಬಂದಿರುವುದಕ್ಕೆ ಮೆಲ್ವಿನ್ ಮೆಂತೇರೋ ಪತ್ನಿ ಲಿಡ್ವೀನಾ ಖುಷಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಲಿಡ್ವೀನಾ, "ಭಾರತ ಸರ್ಕಾರ ವಾರಗಳ ಮೊದಲೇ ಪರಿಸ್ಥಿತಿ ಊಹಿಸಿ ಭಾರತೀಯರ ರಕ್ಷಣೆಗೆ ಮುಂದಾಗಿತ್ತು. ಅಫ್ಘನ್‌ನಲ್ಲಿ ತಾಲಿಬಾನ್ ಅಟ್ಟಹಾಸ ಆರಂಭವಾದಾಗಲೇ ಭಾರತ ಸರ್ಕಾರ ನೆರವಿಗೆ ಬಂದಿದೆ. ವಾರಗಳ ಮೊದಲೇ ನಮ್ಮವರಿಗೆ ಭಾರತಕ್ಕೆ ತೆರಳಲು ರಿಜಿಸ್ಟರ್ ಮಾಡಲು ಸೂಚಿಸಲಾಗಿತ್ತು. ಹೀಗಾಗಿ ನನ್ನ ಪತಿ ಮೊದಲೇ ರಿಜಿಸ್ಟರ್ ಮಾಡಿ ಕಾಯುತ್ತಿದ್ದರು. ಏರ್‌ಫೋರ್ಸ್ ವಿಮಾನ ಸಿಕ್ಕ ಕೂಡಲೇ ಅಲ್ಲಿಂದ ಇಲ್ಲಿಗೆ ಬಂದಿದ್ದಾರೆ.''
"ನಮ್ಮ ಸರ್ಕಾರದ ಬಗ್ಗೆ ಹೆಮ್ಮೆಯಿದೆ, ಧನ್ಯವಾದ ಸಲ್ಲಿಸುತ್ತೇನೆ. ತಾಲಿಬಾನ್ ದಾಳಿಯಾದ ದಿನ ನನ್ನ ಪತಿ ದಿನನಿತ್ಯದಂತೆ ನನಗೆ ಕರೆ ಮಾಡಿರಲಿಲ್ಲ. ಹೀಗಾಗಿ ನಾನೇ ಅವರಿಗೆ ಕರೆ ಮಾಡಿದಾಗ ಅಲ್ಲಿನ ಪರಿಸ್ಥಿತಿ ಬಗ್ಗೆ ಆತಂಕದಿಂದ ಹೇಳಿದರು. ಆ ಕ್ಷಣದಿಂದ ಅವರು ಬರುವವರೆಗೆ ನಾವು ನಿದ್ದೆಯನ್ನೇ ಮಾಡಿಲ್ಲ, ಊಟವನ್ನೂ ಮಾಡಿಲ್ಲ."
Recommended Video

ಭಾರತೀಯ ವಾಯುಸೇನೆ ಅವಿರತವಾಗಿ ಶ್ರಮಿಸುತ್ತಿದೆ
"ಇಲ್ಲಿನ ಸ್ಥಳೀಯ ಶಾಸಕ ಯು.ಟಿ. ಖಾದರ್ ಕೂಡ ನಮ್ಮ ನೆರವಿಗೆ ಬಂದಿದ್ದಾರೆ. ಸದ್ಯ ನನ್ನ ಗಂಡನ ತಮ್ಮ ಅಲ್ಲಿಂದ ಕತಾರ್‌ಗೆ ಏರ್‌ಲಿಫ್ಟ್ ಆಗಿದ್ದಾನೆ. ಆದರೆ ಆ ಬಳಿಕ ಅವನು ನಮ್ಮ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಈಗ ಅವನು ಎಲ್ಲಿದ್ದಾನೆ, ಹೇಗಿದ್ದಾನೆ ಅನ್ನುವ ಬಗ್ಗೆ ಮಾಹಿತಿಯಿಲ್ಲ. ಆದರೆ ನನ್ನ ಪತಿಗೆ ಬೇರೊಬ್ಬರಿಂದ ಬಂದ ಮಾಹಿತಿ ಪ್ರಕಾರ ಅವನು ಕತಾರ್‌ನಲ್ಲೇ ಇದ್ದಾನೆ ಅಂತ ಹೇಳಲಾಗುತ್ತಿದೆ. ಆದರೆ ನಮಗ್ಯಾರಿಗೂ ಅವನು ಈವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಮಾಹಿತಿ ಪ್ರಕಾರ ಅವನು ಇಲ್ಲಿಗೆ ಬರುವುದಕ್ಕೆ ಒಂದು ವಾರ ಆಗಬಹುದು," ಅಂತಾ ಲಿಡ್ವೀನಾ ಹೇಳಿದ್ದಾರೆ.
ಒಟ್ಟಿನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮತ್ತೆ ಕರಾಳ ಅಧ್ಯಾಯ ಬರೆಯೋಕೆ ಮುನ್ನುಡಿ ಬರೆಯುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ಭಾರತಕ್ಕೆ ಕರೆದು ತರಲು ಭಾರತ ಸರ್ಕಾರ ಮತ್ತು ಭಾರತೀಯ ವಾಯುಸೇನೆ ಅವಿರತವಾಗಿ ಶ್ರಮಿಸುತ್ತಿದೆ.












Click it and Unblock the Notifications