ಮುಂದಿನ ಯಾವುದೇ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ: ಶಕುಂತಲಾ ಶೆಟ್ಟಿ
ಮಂಗಳೂರು, ಮೇ 17: ಇನ್ನು ಮುಂದೆ ಯಾವುದೇ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಹೀಗಂತ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಬಿಜೆಪಿಯ ಅಭ್ಯರ್ಥಿ ಸಂಜೀವ ಮಠಂದೂರು ಅವರ ಎದುರು ಸೋಲು ಅನುಭವಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಪುತ್ತೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ನಾನು ಇದುವರೆಗೆ ನಾಲ್ಕು ಬಾರಿ ಸೋತಿದ್ದೇನೆ. ಆದ್ದರಿಂದ ಈ ಬಾರಿಯ ಸೋಲಿನಿಂದ ತಾನು ಕಂಗೆಟ್ಟಿಲ್ಲ ಎಂದು ಹೇಳಿದರು. ಆದರೆ ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ಮುಂದೆ ಯಾವ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಚುನಾವಣಾ ಸಂದರ್ಭದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡಿದ್ದೆ. ಮುಂದೆಯೂ ಭೇಟಿ ನೀಡುತ್ತೇನೆ ಎಂದು ಅವರು ಹೇಳಿದರು.

ಸದ್ಯದಲ್ಲೇ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗುವುದೆಂದು ಹೇಳಿದ ಅವರು ಮುಂದಿನ ಬಾರಿ ವಿಧಾನಸಭೆ ಚುನಾವಣೆಗೆ ಹೊಸ ಸಮರ್ಥ ಅಭ್ಯರ್ಥಿಯನ್ನು ಹುಡುಕಿ ಒಗ್ಗಟ್ಟಿನಿಂದ ಗೆಲ್ಲಿಸುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು.











Click it and Unblock the Notifications