ಮಂಗಳೂರಿನಲ್ಲಿ 10 ರೂ.ಗೆ ಊಟ ಸಿಗುತ್ತೆ!

ಹೌದು ನೀವು ನಂಬಲೇಬೇಕು. ಮಂಗಳೂರಿನಲ್ಲಿ ಕೇವಲ 10 ರೂ.ಗಳಿಗೆ ಹೊಟ್ಟೆತುಂಬಾ ಊಟ ದೊರೆಯುತ್ತದೆ. ದರ ಕಡಿಮೆ ಇದ್ದರೆ, ರುಚಿ ಚೆನ್ನಾಗಿರುವುದಿಲ್ಲ ಎಂದು ನೀವು ಗೊಣಗುವುದು ಬೇಡ. ಶುಚಿ ರುಚಿಗೆ ಇಲ್ಲಿ ಆದ್ಯತೆ ನೀಡಲಾಗುತ್ತದೆ.
ಮಂಗಳೂರಿನ ಪದವಿನಂಗಡಿ ನಾರಾಯಣ ಮಹಾಲಸ ದೇವಾಲಯದ ಬಳಿ ಇರುವ ಹೋಟೆಲ್ 10 ರೂ.ಗಳಿಗೆ ಊಟ ನೀಡುತ್ತದೆ. ಕಳೆದ 35 ವರ್ಷಗಳಿಂದ ಈ ಹೋಟೆಲ್ ಕಾರ್ಯ ನಿರ್ವಹಿಸುತ್ತಿದೆ. ಮಂಗಳೂರು ನಗರದಿಂದ ಸುಮಾರು 8 ಕಿ.ಮೀ.ದೂರದಲ್ಲಿ ಈ ಹೋಟೆಲ್ ಇದೆ.
ಸ್ಥಳೀಯ ಜನರು ಇದನ್ನು 'ಚಂದ್ರಹಾಸಣ್ಣ'ನ ಹೊಟೇಲ್ ಎಂದು ಕರೆಯುತ್ತಾರೆ. ಈ ಹೋಟೆಲ್ ಮಾಲೀಕ ಚಂದ್ರಹಾಸ್ ದೇವಾಡಿಗ. ಬಡವರ ನೋವುಗಳ ಬಗ್ಗೆ ಚೆನ್ನಾಗಿ ಅರಿತಿರುವ ಇವರು, ಅಗ್ಗದ ದರದಲ್ಲಿ ಊಟ ನೀಡುತ್ತಿದ್ದಾರೆ.
ಚಂದ್ರಹಾಸ ದೇವಾಡಿಗ ಅವರು ಹೊಟೇಲ್ ಪ್ರಾರಂಭಿಸಿದ್ದು 1977ರಲ್ಲಿ. ಆಗ ಅವರು ಕೇವಲ 2 ರೂ.ಗಳಿಗೆ ಊಟ ನೀಡುತ್ತಿದ್ದರು. ನಂತರ 1990ರಲ್ಲಿ ಊಟದ ದರವನ್ನು 5 ರೂ.ಗಳಿಗೆ ಹೆಚ್ಚಿಸಿದರು. ನಂತರ 2012ರಲ್ಲಿ 8 ರೂ.ಗಳಾಯಿತು. ಸದ್ಯ 10 ರೂ.ಗಳಿಗೆ ಊಟ ನೀಡುತ್ತಿದ್ದಾರೆ.
10 ರೂ.ಗೆ ಏನು ಸಿಗುತ್ತೆ : 10 ರೂ. ಊಟದಲ್ಲಿ ನಿಮಗೆ ಅನ್ನದ ಜೊತೆಗೆ ತರಕಾರಿ ಗಸಿ, ಪಲ್ಯ, ಸಾಂಬಾರ್ ಮತ್ತು ಉಪ್ಪಿನಕಾಯಿ ದೊರೆಯುತ್ತದೆ. ಸಾಂಬರ್ ಸಹ ರುಚಿಯಾಗಿರುತ್ತದೆ ಎನ್ನುತ್ತಾರೆ ಇಲ್ಲಿ ಊಟ ಮಾಡಿದ ಜನರು.
ದಿನನಿತ್ಯ ಸುಮಾರು 250 ರಿಂದ 300 ಜನರು ಇಲ್ಲಿಗೆ ಊಟಕ್ಕೆ ಆಗಮಿಸುತ್ತಾರೆ. ಸಂಜೆ ಇಲ್ಲಿ ಟೀ, ತಿಂಡಿಗಳು ಲಭಿಸುತ್ತದೆ ತಿಂಡಿಗಳಿಗೆ 6 ರೂ. ದರ ನಿಗದಿಗೊಳಿಸಲಾಗಿದೆ. ನೀವು ಮಂಗಳೂರಿನ ಕಡೆ ಹೋದರೆ, 10 ರೂ.ಗೆ ಒಮ್ಮೆ ಊಟ ಮಾಡಿ ಬನ್ನಿ.











Click it and Unblock the Notifications