ಪಾರ್ಟಿಯೋ ಭೇಟಿಯೋ, ಮೋಹನ್ ಆಳ್ವ- ರಾ.ಲಿಂ. ರೆಡ್ಡಿ ಫೋಟೋ ವಿವಾದ
ಮಂಗಳೂರು, ಸೆಪ್ಟೆಂಬರ್ 22 : ಗೃಹ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ್ ಆಳ್ವ ಜೊತೆ ಮಾತುಕತೆ ನಡೆಸುತ್ತಿರುವ ದೃಶ್ಯವೊಂದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಕಾವ್ಯಾ ಪೋಷಕರನ್ನು ಎರಡು ಗಂಟೆ ಕಾಯಿಸಿದ ಬಳಿಕ ಭೇಟಿ ಮಾಡಿ, ನ್ಯಾಯ ಒದಗಿಸುತ್ತೇನೆ ಎಂದಷ್ಟೇ ಹೇಳಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಮೋಹನ್ ಆಳ್ವಾ ಜೊತೆ ಪಾರ್ಟಿ ಮಾಡಿ ಹೋದರು ಎಂಬ ಟೀಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ನಿಗೂಢ ಸಾವಿನ ತನಿಖೆಯನ್ನು ಸಿಐಡಿಗೆ ವಹಿಸಬೇಕೆಂದು ಮನವಿ ಸಲ್ಲಿಸಲು ಕಾವ್ಯಾ ತಂದೆ ಲೋಕೇಶ್, ತಾಯಿ ಬೇಬಿ ಪೂಜಾರಿ ಹಾಗೂ ಜಸ್ಟೀಸ್ ಫಾರ್ ಕಾವ್ಯಾ ಸಂಘಟನೆಯ ಪ್ರತಿನಿಧಿಗಳು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಮಂಗಳೂರಿನಲ್ಲಿ ಭೇಟಿಯಾಗಿದ್ದರು.
ಮನವಿ ಸ್ವೀಕರಿಸಿದ ಗೃಹ ಸಚಿವರು, ಈ ಪ್ರಕರಣದ ಕುರಿತು ಪೊಲೀಸ್ ಕಮಿಷನರ್ ಬಳಿ ಮಾತನಾಡಿ ಮಾಹಿತಿ ಪಡೆದಿದ್ದೇನೆ. ತನಿಖೆ ಸದ್ಯ ಪ್ರಗತಿಯಲ್ಲಿದೆ. ವಿವರಗಳನ್ನು ಶೀಘ್ರದಲ್ಲಿ ಬಹಿರಂಗಪಡಿಸಲಾಗುವುದು ಎಂದು ಕಾವ್ಯಾ ಹೆತ್ತವರು ಮತ್ತು ಜಸ್ಟೀಸ್ ಫಾರ್ ಕಾವ್ಯಾ ಸಂಘಟನೆ ಮುಖಂಡರಿಗೆ ಭರವಸೆ ನೀಡಿದ್ದರು.

ಕಾವ್ಯಾ ಪೋಷಕರು ಮತ್ತು ಜಸ್ಟೀಸ್ ಫಾರ್ ಕಾವ್ಯಾ ಸಂಘಟನೆಯ ಸದಸ್ಯರು ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾಗಲು ಎರಡು ಗಂಟೆ ಕಾಯಬೇಕಾಯಿತು. ಗಡಿಬಿಡಿಯಲ್ಲಿ ಮನವಿ ಸ್ವೀಕರಿಸಿದ ರಾಮಲಿಂಗಾ ರೆಡ್ಡಿ ಎರಡು ನಿಮಿಷ ಮಾತನಾಡಲೂ ಪುರುಸೊತ್ತಿಲ್ಲದವರಂತೆ ಹೊರಟುಬಿಟ್ಟಿದ್ದರು.
ಆದರೆ, ಡಾ. ಮೋಹನ್ ಆಳ್ವ ಅವರ ಜೊತೆ ಕೂತು ಸಾವಕಾಶವಾಗಿ ಮಾತು, ತಮಾಷೆ ಎಲ್ಲ ಕೇಳಿಕೊಂಡು ಹೋಗುವಷ್ಟು ಪುರುಸೊತ್ತು ತೋರಿದ್ದಾರೆ ಎಂಬ ಟೀಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. ಆಳ್ವ ಹಾಗೂ ರೆಡ್ಡಿ ಇರುವ ಫೋಟೊಗಳು ಈಗ ವೈರಲ್ ಆಗಿವೆ.
ಮೂಡಬಿದಿರೆಯ ಶಾಸಕ ಅಭಯಚಂದ್ರ ಜೈನ್, ಅರಣ್ಯ ಸಚಿವ ರಮಾನಾಥ ರೈ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮುಂತಾದವರ ಜತೆಗೆ ಸೇರಿ ರಾಮಲಿಂಗಾ ರೆಡ್ಡಿ ಅವರು ಮಾಡಿದ ಪಾರ್ಟಿಯಲ್ಲಿ ಆಳ್ವ ಕೂಡ ಇದ್ದಾರೆ. ಅದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.












Click it and Unblock the Notifications