ಜ.30 ರಂದು ಜೋಡುಕರೆ ಬಯಲು ಕಂಬಳ: ಡಿಸಿಎಂ ಭಾಗಿ
ಮಂಗಳೂರು, ಜನವರಿ 29: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ "ವೀರ-ವಿಕ್ರಮ' ಜೋಡುಕರೆ ಬಯಲು ಕಂಬಳ ಜ.30ರಂದು ಶನಿವಾರ ನಡೆಯಲಿದೆ.
ಜಿಲ್ಲೆಯ ಪ್ರಥಮ ಕಂಬಳಕ್ಕೆ ಭಾರೀ ಸಿದ್ಧತೆ ನಡೆಸಲಾಗಿದ್ದು, ಈಗಾಗಲೇ ಸ್ಥಳೀಯ ಎಲಿಯನಡುಗೋಡು, ಆರಂಬೋಡಿ ಮತ್ತಿತರ ಗ್ರಾಮಗಳ ಗ್ರಾಮಸ್ಥರು ಮತ್ತು ಕಂಬಳಾಸಕ್ತರು ಶ್ರಮದಾನ ಮಾಡುವ ಮೂಲಕ ಕಂಬಳ ಕೆರೆ ದುರಸ್ತಿಗೊಳಿಸಿದ್ದಾರೆ.
ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ನಿರ್ಧಾರದಂತೆ ಕಟ್ಟುನಿಟ್ಟಿನ ಕೋವಿಡ್ ನಿಯಮಾವಳಿ ಪಾಲನೆ ಮಾಡಲಾಗುತ್ತದೆ. ಒಟ್ಟು 150ಕ್ಕೂ ಹೆಚ್ಚು ಜೋಡಿ ಕೋಣಗಳು ಕಂಬಳದಲ್ಲಿ ಭಾಗವಹಿಸಲಿವೆ ಎಂದು ಕಂಬಳ ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತೋಡಿ ಮಾಹಿತಿ ನೀಡಿದ್ದಾರೆ.

ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ನಡೆಯುವ ಈ ಕಂಬಳ ಕೂಟಕ್ಕೆ ಸ್ಥಳಿಯ ಪೂಂಜ ಕ್ಷೇತ್ರದ ಅಸ್ರಣ್ಯ ಕೃಷ್ಣಪ್ರಸಾದ್ ಆಚಾರ್ಯ ಚಾಲನೆ ನೀಡಲಿದ್ದಾರೆ. ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ, ಮೂಡಬಿದರೆ ಚೌಟರ ಅರಮನೆಯ ಕುಲದೀಪ್ ಎಂ. ಮತ್ತಿತರ ಗಣ್ಯರು ಭಾಗಿಯಾಗಲಿದ್ದಾರೆ.

ಶಾಸಕ ರಾಜೇಶ ನಾಯ್ಕ ಕುಳವಾಡಿಗುತ್ತು ಕಂಬಳ ಕೂಟದ ಅಧ್ಯಕ್ಷತೆ ವಹಿಸಲಿದ್ದು, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಹಿತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ, ಭಟ್ಕಳ ಶಾಸಕ ಸುನಿಲ್ ನಾಯಕ್, ಸೊರಬ ಶಾಸಕ ಕುಮಾರ್ ಬಂಗಾರಪ್ಪ, ಶಾಸಕರಾದ ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಎಂಎಲ್ಸಿ ಪ್ರತಾಪಸಿಂಹ ನಾಯಕ್ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.












Click it and Unblock the Notifications