ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ಬಂಧನ
ಮಂಗಳೂರು, ಸೆಪ್ಟೆಂಬರ್ 29 : ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತರನ್ನು ಪೋಲೀಸರು ಬಂಧಿಸಿದ್ದಾರೆ. ಪುತ್ತೂರು ಸಂಪ್ಯ ಪೊಲೀಸ್ ಠಾಣಾಧಿಕಾರಿ ಅಬ್ದುಲ್ ಖಾದರ್ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಸೆಪ್ಟಂಬರ್ 15 ರಂದು ಪುತ್ತೂರಿನಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನೆಯಲ್ಲಿ ಜಗದೀಶ್ ಕಾರಂತ್ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಸಂಪ್ಯ ಪೋಲೀಸ್ ಠಾಣಾಧಿಕಾರಿಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು.
ಅಬ್ದುಲ್ ಖಾದರ್ ಅವರನ್ನು ತಲೆ ಬೋಳಿಸಿ ಕತ್ತೆ ಮೇಲೆ ಕೂರಿಸಿ ಯಾಕೆ ಮೆರವಣಿಗೆ ಮಾಡಬಾರದು ಎನ್ನುವ ರೀತಿಯಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಪುತ್ತೂರು ನಗರ ಪೋಲೀಸರು ಪ್ರತಿಭಟನೆ ನಡೆದ ಒಂದು ವಾರದ ಬಳಿಕ ಸ್ವಯಂಪ್ರೇರಿತ ದೂರು ದಾಖಲಿಸಿದ್ದರು.
ಪೋಲೀಸ್ ಅಧಿಕಾರಿಯ ವಿರುದ್ಧ ಮಾತನಾಡಿದ ಜಗದೀಶ್ ಕಾರಂತರ ವಿರುದ್ಧ ಪ್ರಕರಣ ದಾಖಲಿಸುವಂತೆ ಗೃಹಸಚಿವ ರಾಮಲಿಂಗಾ ರೆಡ್ಡಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಪೋಲೀಸರಿಗೆ ಸೂಚಿಸಿದ್ದರು.
ಈ ಸಂಬಂಧ ಇಂದು ಬಿಹಾರದಲ್ಲಿ ಜಾಗರಣ ವೇದಿಕೆಯ ಬೈಠಕ್ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಕಾರಂತರನ್ನು ದಕ್ಷಿಣಕನ್ನಡ ಜಿಲ್ಲಾ ಅಪರಾಧ ಪತ್ತೆದಳ ಬಂಧಿಸಿದೆ. ಜಗದೀಶ ಕಾರಂತರ ವಿರುದ್ಧ ಪುತ್ತೂರಿನಲ್ಲಿ ಪ್ರಕರಣ ದಾಖಲಿಸಿರುವ ಹಿನ್ನಲೆಯಲ್ಲಿ ಅವರನ್ನು ಇಂದು ಸಂಜೆಯೊಳಗೆ ಪುತ್ತೂರು ನ್ಯಾಯಾಧೀಶರ ಮುಂದೆ ಪೋಲೀಸರು ಹಾಜರುಪಡಿಸುವ ಸಾಧ್ಯೆತೆಯಿದೆ.












Click it and Unblock the Notifications