ವಿಡಿಯೋ; ಹಿಜಾಬ್ ವಿವಾದಕ್ಕೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ
ಉಡುಪಿ, ಫೆಬ್ರವರಿ 11; ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಜಾಬ್, ಕೇಸರಿ ವಿವಾದ ಭುಗಿಲೆದ್ದಿದ್ದರೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಶುಕ್ರವಾರ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಆಗಮಿಸಿದರು. ಮಾಧ್ಯಮದವರು ಹಿಜಾಬ್ ವಿವಾದದ ಬಗ್ಗೆ ಪ್ರಶ್ನೆ ಕೇಳಿದಾಗ ಅವರು ಪ್ರತಿಕ್ರಿಯೆ ನೀಡಲಿಲ್ಲ.
ಮಾಧ್ಯಮದವರಿಗೆ "ನೋ ಹಿಜಾಬ್ ಓನ್ಲಿ ಎಲೆಕ್ಷನ್" ಅಂತಾ ಹೇಳುವ ಮೂಲಕ ಸೂಚ್ಯವಾಗಿ ಹೇಳಿದ ಶೋಭಾ ಕರಂದ್ಲಾಜೆ, ಹಿಜಾಬ್ ಕುರಿತ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಸಂಸದರೂ ಆಗಿರುವ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವರಾದ ಬಳಿಕ ವಿವಾದಗಳಿಗೆ ಗುಡ್ ಬೈ ಹೇಳಿದ್ದು, ಯಾವುದೇ ವಿವಾದಾತ್ಮಕ ಹೇಳಿಕೆ ನೀಡದೇ, ವಿವಾದಗಳಿಗೆ ಪ್ರತಿಕ್ರಿಯೆ ನೀಡಿದೆ ಅಂತರ ಕಾಯ್ದುಕೊಂಡಿದ್ದಾರೆ.
ಸಚಿವರಾದ ಬಳಿಕ ತನ್ನನ್ನು ಆರಿಸಿ ಕೇಂದ್ರಕ್ಕೆ ಕಳುಹಿಸಿದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಪರ್ಕದಿಂದಲೂ ಶೋಭಾ ಕರಂದ್ಲಾಜೆ ದೂರ ಉಳಿದಿದ್ದಾರೆ. ಇದೀಗ ತನ್ನ ಕ್ಷೇತ್ರದಲ್ಲಿ ಉಂಟಾಗಿರುವ ಜಟಿಲ ಸಮಸ್ಯೆಯ ಬಗ್ಗೆಯೂ ಮಾತನಾಡಲಿಲ್ಲ.
ಉಡುಪಿಯ ಹಿಜಾಬ್ ವಿವಾದ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ವಿವಾದದಿಂದ ಹಿಂದೆ ವಿದೇಶಿ ಶಕ್ತಿಗಳು ಕೆಲಸ ಮಾಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ಪ್ರಕರಣವನ್ನು ಎನ್ಐಎಗೆ ಒಪ್ಪಿಸಬೇಕೆಂದು ಸ್ವತಃ ಉಡುಪಿ ಶಾಸಕ ರಘಪತಿ ಭಟ್ ಅವರೇ ಮನವಿ ಮಾಡಿದ್ದರು. ಆದರೆ ಉಡುಪಿ ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ ಮಾತ್ರ ಈ ಕುರಿತ ಪ್ರಶ್ನೆಗೂ ಉತ್ತರಿಸೋಕೆ ನಿರಾಕರಿಸಿದ್ದಾರೆ.
ಇದಕ್ಕೂ ಮುನ್ನ ಉತ್ತರ ಪ್ರದೇಶದ ಚುನಾವಣೆ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ, "ಉತ್ತರ ಪ್ರದೇಶದಲ್ಲಿ ಮೊದಲನೆಯ ಹಂತದ ಚುನಾವಣೆ ನಡೆದಿದೆ. ಬಿಜೆಪಿಗೆ ದೊಡ್ಡ ಪ್ರಮಾಣದ ಬೆಂಬಲ ಕಾಣುತ್ತಿದೆ. ಉತ್ತರ ಪ್ರದೇಶದಲ್ಲಿ ಮೋದಿ ಹಾಗೂ ಯೋಗಿಯವರ ಹೆಸರು ಮೊಳಗುತ್ತಿದೆ. ಅವರ ನಾಮಬಲ, ಅಭಿವೃದ್ಧಿಪರ ಕಾರ್ಯ, ಕಾನೂನು ಸುವ್ಯವಸ್ಥೆ ಸರಿಪಡಿಸಿರುವ ಕೆಲಸ ಜನರ ಮನಸ್ಸನ್ನು ಗೆದ್ದಿದೆ" ಎಂದರು.
"ನನ್ನ ವಿಭಾಗದ ಚುನಾವಣೆ ಫೆಬ್ರವರಿ 23, 27 ಹಾಗೂ ಮಾರ್ಚ್ 3ರಂದು ನಡೆಯಲಿದೆ. ಅವಧ್ ಕ್ಷೇತ್ರ ಬಿಜೆಪಿಗೆ ಭದ್ರ ನೆಲೆಯನ್ನು ಕೊಟ್ಟಿರುವ ಕ್ಷೇತ್ರ. ಆದ್ದರಿಂದ ಆ ಕ್ಷೇತ್ರದಲ್ಲೂ ಬಿರುಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ತಳಹಂತದ ಸಂಘಟನೆಗೆ ಒತ್ತು ನೀಡಿದ್ದು, ಬಹಳ ದೊಡ್ಡ ಅಂತರದಲ್ಲಿ ಯೋಗಿ ಸರಕಾರ ಮತ್ತೆ ಬರುವ ವಿಶ್ವಾಸವಿದೆ" ಎಂದು ಹೇಳಿದರು.
"ಆ ರೀತಿಯ ವಾತಾವರಣ ಉತ್ತರ ಪ್ರದೇಶದಲ್ಲಿದೆ. ಜನರು ಯೋಗಿ ಹಾಗೂ ಮೋದಿಯವರ ಅಭಿವೃದ್ಧಿಯ ಕೆಲಸವನ್ನು ಕೇಳುತ್ತಿದ್ದಾರೆ. ಆದ್ದರಿಂದ ಮನೆಮನೆಯಲ್ಲೂ ಅಲ್ಲಿ ಅಭಿವೃದ್ಧಿ ಕಾರ್ಯ ಆಗಿದೆ. ಆದ್ದರಿಂದ ಜನರು ಇದನ್ನು ಮಾತನಾಡುತ್ತಿದ್ದು, ನಮ್ಮೆಲ್ಲರಿಗೂ ಪ್ರಚಾರ ಮಾಡಲು ಬಹಳ ಸಂತೋಷವಾಗಿದೆ" ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.












Click it and Unblock the Notifications