ದಕ್ಷಿಣ ಕನ್ನಡದಲ್ಲಿ ಮಳೆ ಅವಾಂತರ: ಮರ ಬಿದ್ದು ಯುವಕ ಸಾವು, ಗುಡ್ಡ ಕುಸಿತಕ್ಕೆ ಮಹಿಳೆ ಬಲಿ
ಮಂಗಳೂರು, ಜುಲೈ 07: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಮಳೆಯ ಅವಾಂತರದಿಂದ ಜನ ತತ್ತರಿಸಿದ್ದಾರೆ. ಮಳೆಯಿಂದ ಸಂಭವಿಸುತ್ತಿರುವ ಅನಾಹುತಗಳು ಕೂಡ ಹೆಚ್ಚಾಗಿದ್ದು, ಧಾರಾಕಾರ ಮಳೆಯಿಂದ ಜನರ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಜಿಲ್ಲೆಯಲ್ಲಿ ಸುರಿದ ಭಾರೀ ಗಾಳಿ ಮಳೆಯಿಂದ ಯುವಕ ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಪರಿಸರದಲ್ಲಿ ನಡೆದಿದೆ. ಬೈಕ್ ಸವಾರ ಪ್ರವೀಣ್ ಆಚಾರ್ಯ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ ಪ್ರವೀಣ್ ಆಚಾರ್ಯ ಬೆಳ್ಮಣ್ ಸಮೀಪದಲ್ಲಿ ಸಾಗುತ್ತಿದ್ದಾಗ ಭಾರೀ ಗಾಳಿ ಮಳೆಗೆ ರಸ್ತೆ ಬದಿಯಲ್ಲಿದ್ದ ಬೃಹತ್ ಆಲದ ಮರ ಏಕಾಏಕಿ ಬೈಕ್ ಮೇಲೆ ಬಿದ್ದಿದೆ. ಮೃತ ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಮರ ಬೈಕ್ ಮೇಲೆ ಬಿದ್ದ ರಭಸಕ್ಕೆ ದುರಾದೃಷ್ಟವಶಾತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಬೈಕ್ ಕೂಡ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಬೃಹತ್ ಆಲದ ಮರ ಬಿದ್ದ ಹಿನ್ನಲೆಯಲ್ಲಿ ವಿದ್ಯುತ್ ಕಂಬ ಸೇರಿದಂತೆ ಇತರ ಕಟ್ಟಡಗಳಿಗೂ ತೀವ್ರ ಹಾನಿಯಾಗಿದ್ದು, ಸ್ಥಳೀಯರು ಕೂಡಲೇ ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ. ಪ್ರವೀಣ್ ಆಚಾರ್ಯ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.
ಬಂಟ್ವಾಳದಲ್ಲಿ ಗುಡ್ಡ ಕುಸಿತ: ಮಹಿಳೆ ಸಾವು
ಕಳೆದ ಮೂರ್ನಾಲ್ಕು ದಿನದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಸಾವು ನೋವುಗಳೂ ಸಂಭವಿಸುತ್ತಿದೆ. ಮಳೆಯ ಅವಾಂತರದಿಂದ ಇಂದು ಬೆಳ್ಳಂಬೆಳಗ್ಗೆ ದುರ್ಘಟನೆಯೊಂದು ನಡೆದಿದೆ. ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಎಂಬಲ್ಲಿ ಗುಡ್ಡ ಕುಸಿತವಾಗಿದ್ದು, ಮನೆಯೊಂದರ ಮೇಲೆ ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ನಂದಾವರ ಗುಂಪುಮನೆ ಎಂಬಲ್ಲಿ ವಾಸ್ತವಿರುವ ಮಹಮ್ಮದ್ ಎನ್ನುವವರ ಮನೆಗೆ ಗುಡ್ಡ ಜರಿದು ಮನೆಯಲ್ಲಿ ವಾಸ್ತವ್ಯವಿದ್ದ ಮಹಮ್ಮದ್ ಅವರ ಪತ್ನಿ ಝರೀನಾ ಹಾಗೂ ಮಗಳು ಶಫಾ ಎಂಬುವರು ಮನೆಯೊಳಗೆ ಸಿಕ್ಕಿಕೊಂಡಿದ್ದರು.
ಬೆಳಗ್ಗೆ 6 ಗಂಟೆಗೆ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದ್ದು, ಎನ್.ಡಿ.ಆರ್.ಎಫ್, ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರೊಂದಿಗೆ ಸುರಿಯುವ ಮಳೆಯಲ್ಲೂ ರಕ್ಷಣಾ ಕಾರ್ಯ ನಡೆಸಿದರು. ಸಫಾ ಅವರನ್ನು ರಕ್ಷಿಸಲಾಗಿದ್ದು, ದುರಾದೃಷ್ಟವಶಾತ್ ಝರೀನಾ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು, ತಹಶಿಲ್ದಾರ್ ಎಸ್.ಬಿ.ಕೂಡಲಗಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications