ಕರಾವಳಿಯಲ್ಲಿ ಮಳೆಯ ಅಬ್ಬರ: ಇಬ್ಬರು ಬಲಿ, ಭಾರಿ ಆಸ್ತಿ ಹಾನಿ
Recommended Video

ಮಂಗಳೂರು, ಮೇ 29: ಕರಾವಳಿ ಜಿಲ್ಲೆಯಲ್ಲಿ ಬೀಳುತ್ತಲೇ ಇರುವ ಮಹಾ ಮಳೆಗೆ ಈವರೆಗೆ ಇಬ್ಬರು ಬಲಿಯಾಗಿದ್ದಾರೆ. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ.
ಮನೆಯ ಗೋಡೆ ಕುಸಿದು ಮೋಹಿನಿ ಎಂಬ ವೃದ್ಧೆ ಅವಶೇಷಗಳ ನಡುವೆ ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ನಡೆಯಿತಾದರೂ ಫಲಕಾರಿಯಾಗಲಿಲ್ಲ. ಇನ್ನು ಮಗುವೊಂದು ಮಳೆಯ ನೀರಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ವರದಿ ಆಗಿತ್ತು.

ಈಗಾಗಲೇ ಹಲವಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ಥವ್ಯವ್ಯಸ್ಥಗೊಂಡಿದ್ದು, ಹಲವಾರು ಮನೆಗಳು ಕುಸಿದು ಬಿದ್ದಿವೆ. ಕೋಟ್ಯಾಂತರ ಮೌಲ್ಯದ ಆಸ್ತಿ ಹಾನಿಯಾಗಿದೆ. ಸ್ಥಳೀಯ ಸಂಸ್ಥೆ ಮತ್ತು ಅಗ್ನಿಶಾಮಕ ದಳ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.
ಮಳೆಯ ಆರ್ಭಟದಿಂದಾಗಿ ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಂಗಳೂರು ವಿವಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದು, ಮಂಗಳೂರಿಗೆ ಬರಬೇಕಿದ್ದ ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಿಗಳಿಂದ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದು, ಅವಶ್ಯಕತೆ ಇದ್ದರೆ ರಕ್ಷಣಾ ಕಾರ್ಯಕ್ಕೆ ಜಲಸೇನೆಯ ನೆರವು ಪಡೆಯುವಂತೆ ಸೂಚಿಸಿದ್ದಾರೆ. ಇದೀಗ ಎನ್‌ಡಿಆರ್‌ಎಫ್‌ನ 38 ಸಿಬ್ಬಂದಿ ಮಂಗಳೂರಿಗೆ ರಕ್ಷಣಾ ಕಾರ್ಯಕ್ಕೆಂದು ಬಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಪರಿಸ್ಥಿತಿಯ ಮಾಹಿತಿ ಪಡೆದಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಅವರು ಟ್ವೀಟ್ ಮಾಡಿದ್ದರು. ಕೇಂದ್ರ ಗೃಹ ಸಚಿವಾಲಯವೂ ಈ ಬಗ್ಗೆ ಟ್ವೀಟ್ ಮಾಡಿದ್ದು, ವಿಪತ್ತು ಎದುರಿಸಲು ಸಂಪೂರ್ಣ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ. ಯಡಿಯೂರಪ್ಪ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಮೀನುಗಾರರು ಸೂಚನೆ ನೀಡುವವರೆಗೂ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದ್ದು. ಮನೆ ಕಳೆದುಕೊಂಡವರಿಗೆ, ಆಸ್ತಿ ಹಾನಿ ಮಾಡಿಕೊಂಡವರಿಗೆ ನಾಳೆ ಪರಿಹಾರ ಘೋಷಿಸುವ ಸಾಧ್ಯತೆ ಇದೆ.












Click it and Unblock the Notifications