ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ಹೆಸರು ಇನ್ಮುಂದೆ ರಾಣಿ ಅಬ್ಬಕ್ಕ ಆಸ್ಪತ್ರೆ; ಸುನೀಲ್ ಕುಮಾರ್
ಮಂಗಳೂರು, ಫೆಬ್ರವರಿ 26: ಕರಾವಳಿ ಭಾಗದ ಬಡ ಗರ್ಭಿಣಿಯರ ಹೆರಿಗೆ ಆಸ್ಪತ್ರೆ ಅಂತಾನೇ ಖ್ಯಾತಿಯಾಗಿರುವ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬ್ರಿಟಿಷ್ ಕಾಲದ ಲೇಡಿಗೋಷನ್ ಎಂಬ ಹೆಸರನ್ನು ತೆಗೆದು ರಾಣಿ ಅಬ್ಬಕ್ಕ ಆಸ್ಪತ್ರೆ ಎಂಬುವುದಾಗಿ ಮರು ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್, "ಮಂಗಳೂರಿನ ಹೆರಿಗೆ ಆಸ್ಪತ್ರೆ ಲೇಡಿಗೋಷನ್‌ನ ಹೆಸರು ಬದಲಾವಣೆಗೆ ಚಿಂತನೆ ಮಾಡಲಾಗಿದೆ. ಲೇಡಿಗೋಷನ್ ಎಂಬ ಹೆಸರನ್ನು ತೆಗೆದು ರಾಣಿ ಅಬ್ಬಕ್ಕ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ,'' ಎಂದರು.
ಬ್ರಿಟಿಷರಿಗಿಂತ ಮೊದಲು ಭಾರತಕ್ಕೆ ದಾಳಿ ಮಾಡಿದ್ದ ಪೋರ್ಚುಗೀಸರನ್ನು ದಿಟ್ಟವಾಗಿ ಎದುರಿಸಿದ ಕರಾವಳಿಯ ವೀರೆ, ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ ಆಗಿದ್ದಾರೆ. ಯಾರೋ ಬ್ರಿಟೀಷರು ಇಟ್ಟು ಹೋದ ಹೆಸರನ್ನು ಮುಂದುವರಿಸುವುದಕ್ಕಿಂತ ರಾಣಿ ಅಬ್ಬಕ್ಕ ಹೆಸರನ್ನು ಇಡುವುದು ಸೂಕ್ತ ಅಂತಾ ಜನರ ಅಭಿಪ್ರಾಯವಾಗಿದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಮಂಗಳೂರು ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಹತ್ತಾರು ಹೆರಿಗೆಗಳಾಗುತ್ತಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿಯ ಹಲವು ಭಾಗದ ಗರ್ಭಿಣಿ ಮಹಿಳೆಯರು ಹೆರಿಗೆಗಾಗಿ ಆಗಮಿಸುತ್ತಾರೆ. ಈ ಆಸ್ಪತ್ರೆಯಲ್ಲಿ ಹುಟ್ಟುವ ಪ್ರತಿ ಮಗು ರಾಣಿ ಅಬ್ಬಕ್ಕನ ಪ್ರೇರಣೆಯನ್ನು ಪಡೆದು ಅವರ ರೀತಿಯೇ ಧೀರೆ ಆಗಲಿ ಎಂದು ಸಚಿವ ಸುನೀಲ್ ಕುಮಾರ್ ಅಪೇಕ್ಷಿಸಿದರು.
ಹೆಸರು ಬದಲಾವಣೆಗೆ ವಿರೋಧ ಬರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ರಾಣಿ ಅಬ್ಬಕ್ಕನ ಹೆಸರಿಗೆ ವಿರೋಧ ಯಾರು ಮಾಡುತ್ತಾರೆ ನೋಡೋಣ. ಆಗ ಆ ವಿಷಯವನ್ನು ನೋಡೋಣ ಎಂದು ಹೇಳಿದ್ದಾರೆ.

ಆದರೆ ಈ ಪ್ರಸ್ತಾಪಕ್ಕೆ ವಿಧಾನಸಭೆ ವಿರೋಧ ಪಕ್ಷ ಉಪ ನಾಯಕ ಯು.ಟಿ. ಖಾದರ್ ವಿರೋಧ ವ್ಯಕ್ತಪಡಿಸಿದ್ದಾರೆ. ಲೇಡಿಗೋಷನ್ ಆಸ್ಪತ್ರೆಗೆ ಇತಿಹಾಸ ಇದೆ. ಅದರದ್ದೇ ಆದ ಸಂಸ್ಕೃತಿ ಇದೆ. ಅಲ್ಲಿನ ಹೆಸರಿಗೆ ಇತಿಹಾಸ ಇದೆ. ಹೆಸರು ಬದಲಾವಣೆ ಪ್ರಸ್ತಾಪ, ಹೆಸರು ಬದಲಾವಣೆಯ ಅಧಿಕಾರ ಸಚಿವರಲ್ಲಿದೆ. ಆದರೆ ಜನರಿಗೆ ಬೇಕಾಗಿರುವುದು ಹೆಸರು ಅಲ್ಲ, ಮೂಲಭೂತ ಸೌಕರ್ಯ ಬೇಕು.
ಮೊದಲು ಸಚಿವರು ಅಲ್ಲಿ ದಿನಕ್ಕೆ ಎಷ್ಟು ಡೆಲಿವರಿ ಆಗುತ್ತಿದೆ. ಎಷ್ಟು ಬೆಡ್ ಬೇಕು ಅನ್ನುವುದನ್ನು ನೋಡಲಿ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಒಂದು ಬೆಡ್ ಕೂಡಾ ಅಲ್ಲಿ ಜಾಸ್ತಿ ಮಾಡಿಲ್ಲ. ವೆಂಟಿಲೇಟರ್ ಕೂಡಾ ಜಾಸ್ತಿಯಾಗಿಲ್ಲ. ನರ್ಸ್ ಸಂಖ್ಯೆಯೂ ಜಾಸ್ತಿ ಮಾಡಿಲ್ಲ. ಅಲ್ಲಿ ಅಭಿವೃದ್ಧಿ ಇನ್ನೂ ಬಹಳ ಆಗಬೇಕಿದೆ. ಹೆಚ್ಚುವರಿ ಬೆಡ್ ಮತ್ತು ಕಟ್ಟಡ ಅಗತ್ಯ ಇದೆ. ಮೊದಲು ಅಭಿವೃದ್ಧಿ ಮಾಡಲಿ ಅನಂತರ ಹೆಸರಿಡಲಿ ಎಂದು ಯುಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಈ ಹಿಂದೆಯೂ ಹಲವು ಹೆಸರು ಬದಲಾವಣೆಗೆ ಜನರ ಒತ್ತಾಯ ಕೇಳಿಬಂದಿತ್ತು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚನ್ನಯ್ಯ ವಿಮಾನ ನಿಲ್ದಾಣವೆಂದು, ಲೇಡಿ ಹಿಲ್ ವೃತ್ತಕ್ಕೆ ನಾರಾಯಣ ಗುರು ವೃತ್ತ ಅಂತಾ ಹೆಸರು ಬದಲಾವಣೆ ಮಾಡಬೇಕೆಂದು ಜನರ ಒತ್ತಾಯ ಕೇಳಿಬಂದಿತ್ತು. ಮಂಗಳೂರು ನಗರದ ಲೈಟ್ ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರ ರಾಮ್ ಶೆಟ್ಟಿ ರಸ್ತೆ ಅಂತಾ ಮರು ನಾಮಕರಣ ಮಾಡಲಾಗಿದೆ.












Click it and Unblock the Notifications