ಏಳು ತಿಂಗಳ ನಂತರ ಮಂಗಳೂರು-ಕಾಸರಗೋಡು ಬಸ್ ಸಂಚಾರ ಆರಂಭ
ಮಂಗಳೂರು, ನವೆಂಬರ್ 16: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಏಳು ತಿಂಗಳಿನಿಂದ ಸ್ಥಗಿತವಾಗಿದ್ದ ಮಂಗಳೂರು- ಕಾಸರಗೋಡು ನಡುವಿನ ಸರ್ಕಾರಿ ಬಸ್ ಸಂಚಾರ ಸೇವೆ ಸೋಮವಾರದಿಂದ ಮತ್ತೆ ಆರಂಭಗೊಂಡಿದೆ.
ಸೋಮವಾರ ಬೆಳಿಗ್ಗೆ 7ರಿಂದ ಸುಮಾರು 20 ಬಸ್ ಗಳನ್ನು ಮಂಗಳೂರಿನಿಂದ ಕಾಸರಗೋಡಿಗೆ ಹಾಗೂ 20 ಬಸ್ ಗಳನ್ನು ಕಾಸರಗೋಡಿನಿಂದ ಮಂಗಳೂರಿಗೆ ಬಿಡಲಾಗಿದೆ. ಕೋವಿಡ್ 19 ನಿಯಮಗಳ ಪಾಲನೆಯೊಂದಿಗೆ ಒಟ್ಟು ಎರಡೂ ರಾಜ್ಯಗಳ 40 ಸರ್ಕಾರಿ ಬಸ್ ಗಳು ಪ್ರಯಾಣಿಕರ ಸೇವೆಯಲ್ಲಿ ತೊಡಗಿಕೊಂಡಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್ ಗಳ ಸಂಚಾರವನ್ನು ಆರಂಭಿಸಲಾಗುವುದು ಎಂದು ತಿಳಿದುಬಂದಿದೆ.

ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಹಂತ ಹಂತವಾಗಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಆಗ ಮಂಗಳೂರಿನಿಂದ ಹೊರಟ ಸರ್ಕಾರಿ ಬಸ್ ಗಳು ತಲಪಾಡಿವರೆಗೆ ಚಲಿಸುತ್ತಿದ್ದವು. ಸೋಮವಾರದಿಂದ ಮಂಗಳೂರಿನಿಂದ ಕಾಸರಗೋಡಿಗೆ ಹಾಗೂ ಕಾಸರಗೋಡಿನಿಂದ ಮಂಗಳೂರಿಗೆ ಬಸ್ ಗಳು ಸಂಚರಿಸುತ್ತಿವೆ. ಅಂತರ ರಾಜ್ಯ ಸರ್ಕಾರಿ ಬಸ್ ಸಂಚಾರದ ಬಗ್ಗೆ ಪ್ರತ್ಯೇಕ ಅನುಮತಿಯ ಅಗತ್ಯವಿಲ್ಲ ಎಂದು ಕೇರಳ ಸಾರಿಗೆ ಕಾರ್ಯದರ್ಶಿಗಳು ಸ್ಪಷ್ಟಪಡಿಸಿದ ಬಳಿಕ ಕಾಸರಗೋಡು ಜಿಲ್ಲಾಡಳಿತ ಬಸ್ ಸಂಚಾರವನ್ನು ಆರಂಭಿಸಿದೆ.












Click it and Unblock the Notifications