G.Janardhana Reddy: ಕುಟುಂಬ ಸಮೇತ ಧರ್ಮಸ್ಥಳಕ್ಕೆ ಭೇಟಿ ನೀಡಿದ ಗಾಲಿ ಜನಾರ್ದನ ರೆಡ್ಡಿ
ಮಂಗಳೂರು, ಜೂನ್, 13: ಮಂಗಳವಾರ (ಜೂನ್ 13) ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಕುಟುಂಬ ಸಮೇತ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಪತ್ನಿ ಅರುಣಾ ಲಕ್ಷ್ಮಿ, ಮಗಳು ರಮಿಣಿ, ಆಳಿಯ ರಾಜೀವ್ ಜೊತೆ ಜನಾರ್ದನ ರೆಡ್ಡಿ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕುಟುಂಬ ಸಮೇತ ಧರ್ಮಸ್ಥಳದಿಂದ ನೇರವಾಗಿ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಜನಾರ್ದನ್ ರೆಡ್ಡಿ ದಂಪತಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಿಬಿಐ ವಿಶೇಷ ಕೋರ್ಟ್ ಆದೇಶ ನೀಡಿದೆ. ಈ ಬಗ್ಗೆ ಧರ್ಮಸ್ಥಳದಲ್ಲಿ ಪ್ರತಿಕ್ರಿಯಿದ ಜನಾರ್ದನ್ ರೆಡ್ಡಿ ಅವರು, ನನ್ನ 150 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಅದರಲ್ಲಿ 80ಕ್ಕೂ ಹೆಚ್ಚು ಆಸ್ತಿಗಳನ್ನು ಕೋರ್ಟ್ ನಿನ್ನೆ ಬಿಡುಗಡೆ ಮಾಡಿದೆ. ಉಳಿದ 72 ಆಸ್ತಿಗಳು ಕೇಸ್ ಇತ್ಯರ್ಥ ಆದ ಮೇಲೆ ಪರಿಹಾರ ಆಗುತ್ತದೆ ಎಂದರು.
ನನಗೆ ನ್ಯಾಯ ವ್ಯವಸ್ಥೆ ಮೇಲೆ ಮೊದಲಿನಿಂದಲೂ ನಂಬಿಕೆ ಇತ್ತು. ನಿನ್ನೆ 80ಕ್ಕೂ ಹೆಚ್ಚು ಆಸ್ತಿಗಳ ಬಿಡುಗಡೆ ಮಾಡಲಾಗಿದೆ. 2009ರ ಪೂರ್ವದ ಆಸ್ತಿಯನ್ನು ಸಿಬಿಐ ಮುಟ್ಟುಗೋಲು ಹಾಕಿತ್ತು, ಅದನ್ನೇ ಕೋರ್ಟ್ ಬಿಡುಗಡೆ ಮಾಡಿದೆ ಎಂದರು. ಅಲ್ಲದೆ ಮೊಮ್ಮಗಳ ಅಕ್ಷರಾಭ್ಯಾಸಕ್ಕೆ ಶೃಂಗೇರಿಗೆ ಬಂದಿದ್ದೆ, ನಂತರ ಧರ್ಮಸ್ಥಳಕ್ಕೂ ಬಂದು ಮಂಜುನಾಥನ ಆಶೀರ್ವಾದ ಮತ್ತು ತಾಯಿಯ ಆಶೀರ್ವಾದ ಪಡೆದಿದ್ದೇನೆ ಎಂದರು.
ನಾನು ನ್ಯಾಯವಾಗಿ ಬದುಕಿದ್ದೇನೆ, ಹಾಗಾಗಿ ಮಂಜುನಾಥ ನ್ಯಾಯ ಕೊಡುತ್ತಾನೆ. ಆರು ವರ್ಷಗಳಿಂದ ಧರ್ಮಸ್ಥಳಕ್ಕೆ ಬರಲು ಆಗಿರಲಿಲ್ಲ, ಈಗ ಕುಟುಂಬ ಸಮೇತ ಬಂದಿದ್ದೇನೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ಕುಟುಂಬ ಸಮೇತರಾಗಿ ಶೃಂಗೇರಿಗೆ ತೆರಳಿ ವಿದ್ಯಾ ಅಧಿದೇವತೆ ತಾಯಿ ಶಾರದಾಂಬೆಯ ದರ್ಶನ ಪಡೆದು ಪುನೀತನಾದೆ. ಶಾರದಾ ಪೀಠದ ಉಭಯ ಜಗದ್ಗುರುಗಳ ಆಶೀರ್ವಾದ ಪಡೆದು ಮೊಮ್ಮಗಳು ಬ್ರಮರಳ ಹುಟ್ಟು ಹಬ್ಬದ ದಿನ ಅಕ್ಷರಾಭ್ಯಾಸ ಮಾಡಿಸಿದ್ದು ವಿಶೇಷವಾಗಿತ್ತು. ಶೃಂಗೇರಿಯ ನರಸಿಂಹವನದಲ್ಲಿ ಸನ್ನಿಧಾನ ಶ್ರೀ ಜಗದ್ಗುರು ವಿಧುಶೇಖರ ಭಾರತಿಗಳ ದರ್ಶನ ಪಡೆದು, ಹಲವಾರು ವಿಚಾರಗಳನ್ನು ಚರ್ಚಿಸಿ ಆಶೀರ್ವಾದ ಪಡೆದಿದ್ದು ನನ್ನ ಪೂರ್ವಜನ್ಮದ ಪುಣ್ಯವೆಂದೇ ಭಾವಿಸಿದ್ದೇನೆ ಎಂದರು.
ಹಾಗೆಯೇ ಶೃಂಗೇರಿ ಪೀಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಗೌರಿ ಶಂಕರ್ ಅವರನ್ನು ಈ ಸಂದರ್ಭದಲ್ಲಿ ನೆನೆಯುತ್ತಿದ್ದೇನೆ.
ಶೃಂಗೇರಿ ಮಠದ ಬಳ್ಳಾರಿ ಶಾಖೆಯ ಮಠಾಧಿಕಾರಿ ಶ್ರೀ ಬಿ.ಕೆ.ಬಿ.ಎನ್.ಮೂರ್ತಿ ಹಾಗೂ ಶ್ರೀ ಮೋಹನ್ ಶಾಸ್ತ್ರಿ ಅವರ ಸಹಕಾರಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ಎಂದಿನಂತೆ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಆಶೀರ್ವಾದ ಸದಾ ನನ್ನ ಕುಟುಂಬದ ಮೇಲಿರಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಎಂದರು.
ಶೃಂಗೇರಿ ಮಠಕ್ಕೂ ಭೇಟಿ ನೀಡಿದ್ದ ರೆಡ್ಡಿ
ಇನ್ನು ಮೊಮ್ಮಗಳ ಹುಟ್ಟುಹಬ್ಬ ಹಿನ್ನೆಲೆ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರು ಭಾನುವಾರ (ಜೂನ್ 11) ಕುಟುಂಬ ಸಮೇತ ಶೃಂಗೇರಿ ಶಾರದಂಬಾ ಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು.
ಮೊಮ್ಮಗಳು ಬ್ರಮರಳ ಹುಟ್ಟುಹಬ್ಬ ಹಿನ್ನೆಲೆ ಜನಾರ್ದನ ರೆಡ್ಡಿ ಅವರು ಕುಟುಂಬ ಸಮೇತ ಶೃಂಗೇರಿ ಮಠಕ್ಕೆ ಭೇಟಿ ನೀಡಿ ಶಾರದಾಂಬೆ ದರ್ಶನ ಪಡೆದರು. ಈ ವೇಳೆ ರೆಡ್ಡಿ ಬ್ರಮರಳ ಅಕ್ಷರಾಭ್ಯಾಸ ಮಾಡಿಸಿ ಗಮನ ಸೆಳೆದಿದ್ದರು.












Click it and Unblock the Notifications