ದಕ್ಷಿಣ ಕನ್ನಡ ಜಿಲ್ಲೆಯ ಯಾವ ಯಾವ ದೇವಸ್ಥಾನಗಳು ಇಂದು ತೆರೆದವು?
ಮಂಗಳೂರು, ಜೂನ್ 08: ಕೊರೊನಾ ಲಾಕ್‌ಡೌನ್ ಬಳಿಕ ಬರೋಬ್ಬರಿ 77 ದಿನಗಳ ನಂತರ ರಾಜ್ಯದಲ್ಲಿ ದೇವಾಲಯಗಳು ತೆರೆದಿವೆ. ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಧರ್ಮಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಮಂಜುನಾಥನ ಸನ್ನಿಧಿಯೂ ಇಂದಿನಿಂದ ಭಕ್ತರಿಗೆ ಪ್ರವೇಶಕ್ಕೆ ಮಕ್ತವಾಗಿದ್ದು, ನೂರಾರು ಭಕ್ತರು ದೇವರ ದರ್ಶನವನ್ನು ಪಡೆದರು.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಬೆಳಿಗ್ಗೆ 8.30ರ ಮಹಾಪೂಜೆಯ ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್ ಬಳಸಿ, ಮಾಸ್ಕ್ ಹಾಕಿ ದೇವರ ದರ್ಶನ ಪಡೆದರು. ದೇವರ ದರ್ಶನ ಹೊರತುಪಡಿಸಿ, ಯಾವುದೇ ಪೂಜೆ, ಸೇವೆ, ಪ್ರಸಾದಕ್ಕೆ ಅವಕಾಶವಿರಲಿಲ್ಲ.
ರಾಜ್ಯಾದ್ಯಂತ ಇಂದಿನಿಂದ ಭಕ್ತರಿಗೆ ತೆರೆದುಕೊಂಡ ದೇಗುಲಗಳು...
ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆಯಲು ಭಾನುವಾರ ರಾತ್ರಿಯಿಂದಲೇ ಭಕ್ತರ ದಂಡು ಆಗಮಿಸಿತ್ತು. ಕರಾವಳಿಯಲ್ಲಿ ಇಂದು ಬಹುತೇಕ ದೇವಸ್ಥಾನಗಳು ಭಕ್ತರಿಗೆ ದರ್ಶನ ಸೇವೆ ನೀಡಿವೆ. ಪೊಳಲಿ ಕ್ಷೇತ್ರ, ಒಡಿಯೂರು ಕ್ಷೇತ್ರ, ಮಾಣಿಲ ಮಹಾಲಕ್ಷ್ಮೀ ಕ್ಷೇತ್ರ, ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ, ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ದ.ಕ. ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಕಟೀಲು ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ ಭಕ್ತರಿಗೆ ಸೇವೆ ಇಲ್ಲ. ಮುಂದಿನ ಆದೇಶದ ತನಕ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲ ಎನ್ನಲಾಗಿದೆ. ಉಡುಪಿಯ ಕೃಷ್ಣಮಠದಲ್ಲೂ ಮುಂದಿನ 30 ದಿನಗಳ ಕಾಲ ಭಕ್ತರಿಗೆ ಶ್ರೀ ಕೃಷ್ಣನ ದರ್ಶನಕ್ಕೆ ಅವಕಾಶವಿರುವುದಿಲ್ಲ. ಈ ಬಗ್ಗೆ ಪೇಜಾವರ ಮಠದ ಶ್ರೀಗಳು ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ ಕದ್ರಿ ಮಂಜುನಾಥೇಶ್ವರ ದೇವಾಲಯಕ್ಕೂ ಭಕ್ತರು ಆಗಮಿಸಿದ್ದು, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೇವರ ದರ್ಶನ ಪಡೆದರು.