ಮಂಗಳೂರು: ಎತ್ತಿನಹೊಳೆ ಯೋಜನೆ ವಿರುದ್ಧ ವಿದ್ಯಾರ್ಥಿಗಳ ಹೋರಾಟ
ಮಂಗಳೂರು, ಸೆಪ್ಟೆಂಬರ್, 11: ನೇತ್ರಾವತಿ ಎತ್ತಿನಹೊಳೆ ನದಿ ತಿರುವು ಯೋಜನೆ ವಿರುದ್ಧ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಸೆಪ್ಟೆಂಬರ್ 19ರ ಶನಿವಾರದಂದು ಸರ್ವ ಕಾಲೇಜ್ ಬಂದ್ ಮಾಡಿ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿದೆ.
ಯೋಜನೆ ಖಂಡಿಸಿ ಆರಂಭವಾಗುವ ಪ್ರತಿಭಟನೆ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಇದರಲ್ಲಿ 160ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಲಿದ್ದು, 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.[ಎತ್ತಿನಹೊಳೆ ಯೋಜನೆಯಿಂದ ನೇತ್ರಾವತಿ ಬರಿದಾಗುತ್ತೆ']

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಸಂಘದ ಕಾನೂನು ಸಲಹೆಗಾರ ದಿನಕರ ಶೆಟ್ಟಿ ಕರಾವಳಿಗೆ ಮಾರಕವಾಗಿರುವ ಎತ್ತಿನ ಹೊಳೆ ಯೋಜನೆಯ ಆಲೋಚನೆಯನ್ನು ಸರ್ಕಾರ ಕೈಬಿಡುವವರೆಗೂ ಸರ್ಕಾರ ಈ ಹೋರಾಟ ಮುಂದುವರೆಸಲಾಗುತ್ತದೆ.
ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು. ಜಿಲ್ಲೆಯ ರಾಜಕಾರಣಿಗಳು ಎಚ್ಚೆತ್ತು ಈ ಯೋಜನೆಯನ್ನು ನಿಲ್ಲಿಸಲು ಮನಸ್ಸು ಮಾಡದಿದ್ದರೆ ವಿದ್ಯಾರ್ಥಿಗಳ ಹೋರಾಟ ಇನ್ನಷ್ಟು ಉಗ್ರರೂಪ ತಾಳಲಿದೆ. ಇದೇ ವಿದ್ಯಾರ್ಥಿಗಳು ಸೆಪ್ಟೆಂಬರ್ 15ರ ಮಂಗಳವಾರದಂದು ನಡೆಯಲಿರುವ ರಾಷ್ಟ್ರೀಯ ಹೆದ್ದಾರಿ ತಡೆಗೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರೋಹಿಣಿ, ಕಾರ್ಯಾಧ್ಯಕ್ಷ ಪ್ರಬಿತ್ ಕುಮಾರ್, ಸಮರ್ಥ ರೈ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications