ನಮ್ಮಲ್ಲಿ ವಿದ್ಯೆ ಇದೆ.. ಪದವಿ ಇದೆ.. ಆದರೆ ಉದ್ಯೋಗವಿಲ್ಲ: ಜಸ್ಟೀಸ್ ಎಚ್‌ಎನ್ ನಾಗಮೋಹನದಾಸ್
ಮಂಗಳೂರು, ಫೆಬ್ರವರಿ.25: "ಐವತ್ತು ವರ್ಷಗಳಲ್ಲಿ ದೇಶ ಕಾಣದ ನಿರುದ್ಯೋಗ ಪ್ರಮಾಣ ಪ್ರಸ್ತುತ ದೇಶದಲ್ಲಿದೆ. ಐವತ್ತು ವರ್ಷಗಳಲ್ಲಿ ದೇಶ ಕಾಣದ ನಿರುದ್ಯೋಗ ಪ್ರಮಾಣ ಪ್ರಸ್ತುತ ದೇಶದಲ್ಲಿದೆ. ನಮ್ಮಲ್ಲಿ ವಿದ್ಯೆ ಇದೆ, ಪದವಿ ಇದೆ ಆದರೆ ಉದ್ಯೋಗವಿಲ್ಲ. ನಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗವು ಸಿಗುತ್ತಿಲ್ಲ. ಪದವಿ ಇದ್ದರೂ ಏನು ಪ್ರಯೋಜನವಿಲ್ಲದಂತಾಗಿದೆ" ಎಂದು ಜಸ್ಟೀಸ್ ಎಚ್ ಎನ್ ನಾಗಮೋಹನದಾಸ್ ಹೇಳಿದರು.
ಮಂಗಳೂರಿನ ಕಲ್ಲಾಪಿನಲ್ಲಿ ಫೆಬ್ರವರಿ 25ರಂದು ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ನ 12ನೇ ರಾಜ್ಯ ಸಮ್ಮೇಳನ ಆರಂಭವಾಗಿದ್ದು, ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಸ್ಟೀಸ್ ಎಚ್ ಎನ್ ನಾಗಮೋಹನದಾಸ್, "ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗ ಯುವಜನರಿದ್ದಾರೆ. ವಿಮೋಚನಾ ಹೋರಾಟದಿಂದ ಹಿಡಿದು ಇಲ್ಲಿಯವರಿಗೆ ಭಾರತಕ್ಕಾಗಿ ಯುವಕರ ಕೊಡುಗೆ ಬಹಳ ಮಹತ್ವದ್ದಾಗಿದೆ. ಅಬ್ಬಕ್ಕ ರಾಣಿಯಂತಹ ಕಿಚ್ಚಿನ ನಾಯಕಿಯ ಜಾಗದಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿ. ಯುವಕರೆಂದರೆ ಬದಲಾವಣೆ, ಪ್ರಗತಿ, ಅನ್ಯಾಯ, ಶೋಷಣೆ, ದಬ್ಬಾಳಿಕೆ ವಿರುದ್ಧ ಹೋರಾಡುವ ಶಕ್ತಿಯಾಗಿದೆ. ಈ ಶಕ್ತಿ ಬಲಗೊಳ್ಳಲಿ ಎಂಬ ಆಶಯದೊಂದಿಗೆ ನಾನು ಸಮ್ಮೇಳನ ಉದ್ಘಾಟಿಸುತ್ತಿದ್ದೇನೆ" ಎಂದರು.

"ಎಲ್ಲಾ ಮಕ್ಕಳು ಒಂದೇ ಎನ್ನುತ್ತೇವೆ. ಆದರೆ ಶಿಕ್ಷಣದಲ್ಲಿ ಯಾಕೆ ತಾರತಮ್ಯ?. ಸಮಾನ ಶಿಕ್ಷಣದ ನೀತಿ ಜಾರಿಯಾಗಬೇಕಿದೆ. ಗುಣಾತ್ಮಕ ಶಿಕ್ಷಣ ನೀಡುವ ವ್ಯವಸ್ಥೆ ಜಾರಿ ಬರಬೇಕಾಗಿದೆ. ಹೊಸ ಶಿಕ್ಷಣ ನೀತಿಯ ಬಗ್ಗೆ ಚರ್ಚೆಯಾಗಬೇಕು. ಉದ್ಯೋಗ ಸೃಷ್ಟಿ ಕಡಿಮೆಯಾದಂತೆ ಅಪರಾಧೀಕರಣ, ಕೋಮುವಾದ, ಭಯೋತ್ಪಾದನೆ, ವೇಶ್ಯಾವಾಟಿಕೆ ಮೊದಲಾದವು ಹೆಚ್ಚಾಗುತ್ತದೆ. ನಿರುದ್ಯೋಗ ಸಮಸ್ಯೆಗೂ, ಕೋಮುವಾದ, ಅಪರಾಧಕ್ಕೂ ನಂಟಿದೆ ಎಂದು ಸರ್ಕಾರ ತಿಳಿದುಕೊಳ್ಳಬೇಕು" ಎಂದು ಹೇಳಿದರು.
"ಯುದ್ಧವನ್ನು ವಿರೋಧಿಸಬೇಕಿದೆ. ಯುದ್ದಕ್ಕಾಗಿ ಖರ್ಚು ಮಾಡುತ್ತಾ ಹೋದರೆ, ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯದಂತಹ ಜನಕಲ್ಯಾಣಗಳು ಹಿನ್ನಡೆ ಅನುಭವಿಸುತ್ತವೆ.ಹಾಗಾಗಿ ಸಂವಿಧಾನದ ಮೂಲಕ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರಲಾಗಿದೆ. ದಲಿತರು, ಮಹಿಳೆಯರು ಈ ದೇಶದ ಅಭಿವೃದ್ದಿಯಲ್ಲಿ ದುಡಿಯಲು ಸಾಧ್ಯವಾಗಿದೆ. ಭಾರತೀಯರಿಗೆ ಮಹಾನ್ ಗ್ರಂಥ ಸಂವಿಧಾನ. ಇದನ್ನು ಓದಬೇಕು, ಅರ್ಥೈಸಿಕೊಳ್ಳಬೇಕು, ಅದರಂತೆ ನಡೆದುಕೊಳ್ಳಬೇಕು" ಎಂದು ಕರೆ ನೀಡಿದರು.

"ಭಾರತ ಬಡತನ, ನಿರುದ್ಯೋಗ, ಕೋಮುವಾದ ಬಲಿಯೊಳಗೆ ಭಾರತ ಸಿಕ್ಕು ನರಳುತ್ತಿದೆ. ಇದರ ವಿರುದ್ಧ ಯುವಕರು ಹೋರಾಡಬೇಕಿದೆ. ಶಿಕ್ಷಣದಲ್ಲಿ ತಾರತಮ್ಯ ಹೆಚ್ಚಾಗುತ್ತಿದೆ. ಶ್ರೀಮಂತರಿಗೆ ಒಂದು, ಬಡವರಿಗೆ ಇನ್ನೊಂದು ಎಂಬ ಆಯ್ಕೆಯ ಮೂಲಕ ಮಕ್ಕಳಲ್ಲಿ ಅಸಮಾನತೆ, ಅಸೂಯೆ ಸೃಷ್ಟಿಯಗುತ್ತಿದೆ. ಈ ತಾರತಮ್ಯ ನಿಲ್ಲಬೇಕದರೆ, ಸಮಾನ ಗುಣಮಟ್ಟದ ಶಿಕ್ಷಣ ಸಿಗಬೇಕು, ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿಯಾಬೇಕು" ಎಂದರು.
ವಿಶ್ರಾಂತ ಜಿಲ್ಲಾಧಿಕಾರಿ (ಐಎಎಸ್), ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎ.ಬಿ. ಇಬ್ರಾಹಿಂ ಮಾತನಾಡಿ, "ಜನರು ಭ್ರಮಾಲೋಕದಲ್ಲಿದ್ದು ಮತ ಚಲಾಯಿಸುತ್ತಿದ್ದಾರೆ. ಕರಾವಳಿಯನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯಲಾಗುತ್ತದೆ. ಆದರೆ ಪ್ರಸಕ್ತ ಸ್ಥಿತಿಯಲ್ಲಿ ನಾವು ಬುದ್ಧಿವಂತರು ಮತ್ತು ಅಕ್ಷರಸ್ಥರ ನಡುವೆ ಬೇರೆಯೇ ವ್ಯಾಖ್ಯಾನವನ್ನು ನೀಡಬೇಕಾಗಿದೆ" ಎಂದರು.
"ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ನೆಲವಿದು, ರಾಣಿ ಅಬ್ಬಕ್ಕರ ಮಾತೃ ಪ್ರಧಾನ ಸಮಾಜವಿದು. ಇದು ನಮಗೆ ಮಾದರಿಯಾಗಬೇಕಾದ ನೆಲ. ಇದು ಶೇಕಡಾ 100 ರಷ್ಟು ಅಕ್ಷರಸ್ಥರು ಇರುವ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಮ್ಮ ಜಿಲ್ಲೆ ಜಗತ್ತಿಗೆ ಮಾದರಿಯಾಗಬೇಕಾದ ಜಿಲ್ಲೆ. ಆದರೆ ಕಳೆದ ಮೂರು ದಶಕಗಳಲ್ಲಿ ನಮ್ಮ ಜಿಲ್ಲೆ, ನಗರ ಕುಖ್ಯಾತಿ ಪಡೆಯುತ್ತಾ ಬಂದಿರುವ ನೆಲವಾಗಿದೆ. ಹೊರ ಜಿಲ್ಲೆಯವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಪ್ರಶ್ನಿಸುವಂತಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications