350 ವರ್ಷ ಹಳೆಯ ದುರ್ಗಾಪರಮೇಶ್ವರಿ ದೇವಾಲಯ ಪುನರ್ ಪ್ರತಿಷ್ಠೋತ್ಸವ
ಮಂಗಳೂರು, ಜನವರಿ 11: ಮಂಗಳೂರು ಹೊರವಲಯದ ಕುಲಶೇಖರ ಸಮೀಪ ಇರುವ ಇತಿಹಾಸ ಪ್ರಸಿದ್ಧ ಕೊಂಗೂರು ಮಠ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪುನರ್ ಪ್ರತಿಷ್ಠೋತ್ಸವ ಮತ್ತು ಬ್ರಹ್ಮಕಲಶೋತ್ಸವ ಜನವರಿ 14 ರಿಂದ 18ರವರೆಗೆ ನಡೆಯಲಿದೆ.
ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಾಲಯದ ಕೆಎನ್ ಬಿಎಂ ಟ್ರಸ್ಟ್ ನ ಟ್ರಸ್ಟಿ ಡಾ.ಸುಬ್ರಹ್ಮಣ್ಯ ಭಟ್, ಕೊಂಗೂರು ಮಠ ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ಸುಮಾರು 350 ವರ್ಷಗಳಷ್ಟು ಪುರಾತನವಾಗಿದ್ದು ಬಹಳ ಪ್ರಸಿದ್ಧಿ ಪಡೆದಿದೆ. ಸರಳ ಮಣ್ಣಿನ ಗೋಡೆಯುಳ್ಳ ಈ ದೇವಸ್ಥಾನವು ಭಕ್ತರ ನಂಬುಕೆಯ ತಾಣವಾಗಿದೆ.
ಸಸ್ಯ ಸಮೃದ್ಧಿಯಾದ, ನಾಗ ಸನ್ನಿಧಿಯಾದ ಈ ಕ್ಷೇತ್ರದ ಸ್ಥಳದಲ್ಲಿ ಭೂತಾರಾಧನೆಯೂ ನಡೆಯುತ್ತದೆ. ಇಲ್ಲಿನ ದೈವಗಳಾದ ಜಟಾಧಾರಿ, ಬ್ರಹ್ಮರ ದೈವ , ರಕ್ತೇಶ್ವರಿ ದೈವ ಮತ್ತು ಗುಳಿಗ ದೈವಗಳು ಸ್ಥಳೀಯರ ಭಕ್ತಿಯ ದ್ಯೋತಕವಾಗಿದೆ ಎಂದು ಹೇಳಿದರು.

ಶ್ರೀ ಕ್ಷೇತ್ರವನ್ನು ಭಕ್ತರ ಆಭಿಪ್ರಾಯ ಮತ್ತು ಆಶಯದ ಆಧಾರದ ಮೇಲೆ ದೇವಾಲಯದ ಜೀರ್ಣೋದ್ದಾರ ನಡೆಸಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2011 ನೇ ಫೇಬ್ರವರಿಯಲ್ಲಿ ಭಕ್ತರ ಉಪಸ್ಥಿತಿಯಲ್ಲಿ ಪ್ರಸಿದ್ಧ ಜ್ಯೋತಿಷಿ ಶ್ರೀ ಬಿ ರಂಗನಾರಾಯಣ ಭಟ್ ಅವರಿಂದ ಅಷ್ಟ ಮಂಗಳ ಪ್ರಶ್ನೆ ವ್ಯವಸ್ಥೆ ಮಾಡಲಾಗಿತ್ತು.
ಜ್ಯೋತಿಷಿಯವರಿಂದ ಅಷ್ಟಮಂಗಳ ಪ್ರಶ್ನೆಯಲ್ಲಿ ಪಡೆದ ನಿರ್ದೇಶನಗಳಂತೆ ಜೀರ್ಣೋದ್ಧಾರ ಕಾರ್ಯಕ್ರಮ ಕೈಗೊಳ್ಳುವ ನಿರ್ಧಾರ ಮಾಡಲಾಗಿದೆ. 2013 ರಲ್ಲಿ ಶಿಲಾನ್ಯಾಸದೊಂದಿಗೆ ಕೆಲಸ ಪ್ರಾರಂಭಿಸಿ 6 ವರ್ಷಗಳ ದೀರ್ಘ ಪ್ರಯತ್ನ ಗಳೊಂದಿಗೆ ಈಗ ಸುಂದರ ದೇವಸ್ಥಾನ ನಿರ್ಮಾಣ ಕೆಲಸ ಮುಗಿಸಲಾಗಿದೆ.

ಇದೇ ಬರುವ ಜನವರಿ 14 ರಿಂದ 18 ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆದು ಜನವರಿ 18 ರ ಕುಂಭ ಲಗ್ನ ಮುಂಜಾನೆ 8:40 ಕ್ಕೆ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶಗಳು ನಡೆಯಲಿದೆ ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಕರವೀರ ಪೀಠದ ಜಗದ್ಗುರು ಶ್ರೀ ವಿದ್ಯಾನರಸಿಂಹ ಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಡಾ.ಸುಬ್ರಹ್ಮಣ್ಯ ಭಟ್ ತಿಳಿಸಿದರು.












Click it and Unblock the Notifications