ಮಂಗಳೂರು : ಡ್ರೈವಿಂಗ್ ಟೆಸ್ಟ್ ಟ್ರಾಕ್ ಕೊಣಾಜೆಗೆ ಸ್ಥಳಾಂತರ
ಮಂಗಳೂರು, ಏ.10 : ಮಂಗಳೂರು ತಾಲೂಕಿನ ಮುಡಿಪುನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಚಾಲನಾ ಪರೀಕ್ಷಾ ಅಂಗಣ ಕೊಣಾಜೆಗೆ ಸ್ಥಳಾಂತರಗೊಂಡಿದೆ. 10 ಎಕರೆ ಪ್ರದೇಶದಲ್ಲಿ 15 ಕೋಟಿ ವೆಚ್ಚದಲ್ಲಿ ಅಂಗಣ ನಿರ್ಮಾಣಗೊಳ್ಳಲಿದೆ.
ಕೊಣಾಜೆ ಸಮೀಪದ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಸಮೀಪದ 10 ಎಕರೆ ಪ್ರದೇಶದಲ್ಲಿ ಅಂಗಣ ನಿರ್ಮಾಣಗೊಳ್ಳಲಿದೆ. ಸ್ಥಳವನ್ನು ಗುರುತಿಸಿ ಸಾರಿಗೆ ಪ್ರಾಧಿಕಾರಕ್ಕೆ ಕೆಐಎಡಿಬಿಯವರು ಭೂಮಿಯನ್ನು ಹಸ್ತಾಂತರ ಮಾಡಿದ್ದಾರೆ. [ಡಿಎಲ್ ಪಡೆಯಲು ಅರ್ಜಿ ಸಲ್ಲಿಸಿ]

ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಟ್ರಾಕ್ ನಿರ್ಮಾಣಗೊಳ್ಳಲಿದ್ದು, ಇದಕ್ಕೆ ಸುಮಾರು 15 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರ ಮೊದಲ ಹಂತದಲ್ಲಿ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಮೊದಲು ಮುಡಿಪುವಿನಲ್ಲಿ ಜಾಗವನ್ನು ಗುರುತಿಸಲಾಗಿತ್ತು. ಆದರೆ, ಅದು ನಗರದಿಂದ ದೂರ ಎಂಬ ಕಾರಣಕ್ಕಾಗಿ ಕೊಣಾಜೆಗೆ ಸ್ಥಳಾಂತರ ಮಾಡಲಾಗಿದೆ. ಯೋಜನೆಯ ನೀಲ ನಕ್ಷೆ ತಯಾರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.
ಟ್ರ್ಯಾಕ್‌ನಲ್ಲಿ ಏನೇನಿದೆ? : ಈ ಅತ್ಯಾಧುನಿಕ ತಂತ್ರಜ್ಞಾನದ ಟ್ರ್ಯಾಕ್‌ನಲ್ಲಿ ಬೈಕ್ ಮತ್ತು ಕಾರುಗಳಿಗೆ ಪ್ರತ್ಯೇಕ ಪಥಗಳನ್ನು ನಿರ್ಮಿಸಲಾಗುತ್ತದೆ. '8' ಆಕಾರ, 'S' ಆಕಾರ, ಹಿಂದೆ-ಮುಂದೆ ಚಾಲನೆ ಮಾಡುವ ವ್ಯವಸ್ಥೆ ಇಲ್ಲಿರುತ್ತವೆ.
ಪಥದಲ್ಲಿ 17 ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತದೆ. ಸಂಚಾರದ ಸಮಯದಲ್ಲಿ ಸಮರ್ಪಕ ರೀತಿಯಲ್ಲಿ ಚಾಲನೆ ಮಾಡಿದ್ದರೆ, ಈ ಸೆನ್ಸಾರ್ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ರವಾನಿಸುತ್ತದೆ. ಈ ದಾಖಲೆಯನ್ನು ತಿದ್ದುಪಡಿ ಮಾಡಲು ಅವಕಾಶವಿಲ್ಲ. ಆದ್ದರಿಂದ ಪಾರದರ್ಶಕವಾಗಿ ಚಾಲನಾ ಪರವಾನಿಗೆ ವಿತರಣೆ ಮಾಡಲು ಸಾಧ್ಯವಾಗಲಿದೆ.












Click it and Unblock the Notifications