ಡಿಜಿಟಲ್ ಇಂಡಿಯಾ: ಕರಾವಳಿಯ ಆಟೋ ರಿಕ್ಷಾಗಳಿಗೆ ಬಂತು ಟ್ಯಾಬ್!
ಮಂಗಳೂರಿನ ಕೆಲ ರಿಕ್ಷಾ ಚಾಲಕರು ಈಗಾಗಲೇ ಟ್ಯಾಬ್ ಅಳವಡಿಸಿದ್ದು, ಇದರಲ್ಲಿ ಕರಾವಳಿಯ ದೇವಸ್ಥಾನ, ಮಸೀದಿ, ಚರ್ಚ್, ಹೋಟೆಲ್‌ಗಳ ವಿವರ, ಮಾಲ್, ಪ್ರವಾಸಿ ತಾಣಗಳು ಹೀಗೆ ಹಲವಾರು ಸ್ಥಳಗಳ ಮಾಹಿತಿಗಳು ಬರುತ್ತಿರುತ್ತದೆ.
ಮಂಗಳೂರು, ಏಪ್ರಿಲ್ 28: ನೋಟ್ ಬ್ಯಾನ್ ನಂತರ ಡಿಜಿಟಲ್ ಇಂಡಿಯಾದ ಕನಸು ವೇಗ ಪಡೆದುಕೊಳ್ಳುತ್ತಿದೆ. ಈ ಹಿಂದೆ ಆಟೋ ರಿಕ್ಷಾಗಳಿಗೆ ಪೇಟಿಎಂ ಅಳವಡಿಸುವ ಮೂಲಕ ಡಿಜಿಟಲ್ ಇಂಡಿಯಾವನ್ನು ಬೆಂಬಲಿಸಿ ಮಾದರಿಯಾಗಿದ್ದ ಮಂಗಳೂರಿನ ರಿಕ್ಷಾ ಚಾಲಕರು ಈಗ ಪ್ರವಾಸಿಗರಿಗೆ ಇಡೀ ನಗರದ ಮಾಹಿತಿಯನ್ನು ನೀಡುವ ಟ್ಯಾಬ್ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.
ಮಂಗಳೂರಿನ ಕೆಲ ರಿಕ್ಷಾ ಚಾಲಕರು ಈಗಾಗಲೇ ಟ್ಯಾಬ್ ಅಳವಡಿಸಿದ್ದು, ಚಾಲಕನ ಹಿಂಭಾಗದಲ್ಲಿ ಈ ಟ್ಯಾಬ್ ಇರುತ್ತದೆ. ಟ್ಯಾಬ್ ನಲ್ಲಿ ಕರಾವಳಿಯ ದೇವಸ್ಥಾನ, ಮಸೀದಿ, ಚರ್ಚ್, ಹೋಟೆಲ್‌ಗಳ ವಿವರ, ಮಾಲ್, ಪ್ರವಾಸಿ ತಾಣಗಳು ಹೀಗೆ ಹಲವಾರು ಸ್ಥಳಗಳ ಸಂಪೂರ್ಣ ಮಾಹಿತಿ ಅದರಲ್ಲಿ ಬರುತ್ತಿರುತ್ತದೆ.[ಅಂಥಿಂಥ ಉಪ್ಪಿನಕಾಯಿ ನೀನಲ್ಲ, ನಿನ್ನಂಥ ಉಪ್ಪಿನಕಾಯಿ ಇನ್ನಿಲ್ಲ!]
ರಿಕ್ಷಾ ಹತ್ತಿದ ಪ್ರಯಾಣಿಕರು ತಮಗೆ ಆಕರ್ಷಕ ಎನಿಸಿದ ಐಕಾನ್ ಮೇಲೆ ಕ್ಲಿಕ್ ಮಾಡಿದ ಕೂಡಲೇ ಅದರ ಇತಿಹಾಸ, ಪ್ರಯಾಣಿಸುವ ಮಾರ್ಗದ ವಿವರ, ತಂಗಲು ಇರುವ ವ್ಯವಸ್ಥೆ ಇತ್ಯಾದಿ ವಿವರಗಳು ತೆರೆದುಕೊಳ್ಳುತ್ತವೆ.
ಹೀಗೆ ವಿಮಾನಗಳಲ್ಲಿ, ಹೈಟೆಕ್ ಬಸ್ಸುಗಳಲ್ಲಿ, ಕಾರುಗಳಲ್ಲಿದ್ದ ಟ್ಯಾಬ್ ವ್ಯವಸ್ಥೆ ರಿಕ್ಷಾಕ್ಕೂ ಕಾಲಿಟ್ಟಿದೆ.

ಟ್ಯಾಬ್ ಕಾರ್ಯನಿರ್ವಹಣೆ ಹೇಗೆ?
ಡಿಜಿಟಲ್ ಪರಿಕಲ್ಪನೆಯನ್ನು ಹೊಂದಿರುವ ಈ ಟ್ಯಾಬ್ ಪ್ರಿಲೋಡೆಡ್ ಸಾಫ್ಟ್‌ವೇರ್‌ನಿಂದ ಕಾರ‍್ಯ ನಿರ್ವಹಿಸುತ್ತದೆ. ಇದರಿಂದ ಇದಕ್ಕೆ ಇಂಟರ್‌ನೆಟ್‌ನ ಅಗತ್ಯ ಬೀಳುವುದಿಲ್ಲ. ನಗರದ ಅಳಕೆಯಲ್ಲಿರುವ 'ಐ ಸರ್ಚ್' ಕಂಪನಿಯ ಬಾಲಕೃಷ್ಣ ಶೆಟ್ಟಿ ಈಗಾಗಲೇ 'ಮಂಗಳೂರು ಟ್ರಿಪ್' ಎಂಬ ಹೆಸರಿನ ಈ ಸಾಫ್ಟ್‌ವೇರ್ ತಯಾರಿಸಿದ್ದಾರೆ.

ಟ್ಯಾಬ್ ಬೆಲೆ ಎಷ್ಟು?
ಪ್ರತಿ ಟ್ಯಾಬ್‌ಗೆ 12 ಸಾವಿರ ರೂಪಾಯಿ ಖರ್ಚು ತಗಲುತ್ತದೆ. ರಿಕ್ಷಾ ಚಾಲಕರಿಗೆ ಈ ಟ್ಯಾಬ್ ಅನ್ನು 'ಕುಡ್ಲ ಸೌಹಾರ್ದ ಸಹಕಾರಿ ಸಂಘ'ದ ಮೂಲಕ ಉಚಿತವಾಗಿ ನೀಡಲಾಗುತ್ತಿದೆ.[ಹೊಸ ಸ್ಕೂಟಿ ಜತೆ ಮಂಗಳೂರಲ್ಲಿ ವಿಷಕಾರಿ ಹಾವು ಫ್ರೀ]

ಪ್ರವಾಸೋದ್ಯಮ ಅಭಿವೃದ್ಧಿಯ ಉದ್ದೇಶ
ಈ ಬಗ್ಗೆ ಮಾಹಿತಿ ನೀಡಿದ ಕುಡ್ಲ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿ.ಎನ್. ಪ್ರಕಾಶ್, ಈ ಟ್ಯಾಬ್ ಅಳವಡಿಸುವ ಐಡಿಯಾವನ್ನು ರಿಕ್ಷಾ ಚಾಲಕರೇ ಸೂಚಿಸಿದ್ದರು. ವಿನೂತನ ಮಾದರಿಯಲ್ಲಿ ಪ್ರವಾಸೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ 'ಪ್ರವಾಸೋದ್ಯಮ ಸಭೆ'ಯಲ್ಲಿ ಈ ಉಪಾಯ ಸೂಚಿಸಿದ್ದರು. ನಂತರ ನಾವೇಕೆ ಇದನ್ನು ಕಾರ್ಯ ರೂಪಕ್ಕೆ ತರಬಾರದು ಎನ್ನುವ ಪ್ರಶ್ನೆ ಮೂಡಿತು. ನಂತರದ ದಿನಗಳಲ್ಲಿ ಈ ಐಡಿಯಾಗೆ ಚಾಲನೆ ಸಿಕ್ಕಿತು ಎಂದಿದ್ದಾರೆ.

ರಿಕ್ಷಾಗಳಿಗೆ ಟ್ಯಾಬ್ ಅಳವಡಿಕೆ
ಈಗಾಗಲೇ ಸಾಕಷ್ಟು ಕಂಪನಿಗಳು ಇಂತಹ ಟ್ಯಾಬ್‌ಗೆ ಹಣ ನೀಡಲು ಮುಂದೆ ಬಂದಿದ್ದಾರೆ. ಆದರೆ ರಿಕ್ಷಾ ಚಾಲಕರಿಗೆ ಟ್ಯಾಬ್ ಕುರಿತು ಸರಿಯಾದ ಮಾಹಿತಿ, ತರಬೇತಿ ನೀಡಿದ ಬಳಿಕ ಈ ಟ್ಯಾಬ್ ಅಳವಡಿಸುವ ಕೆಲಸ ನಡೆಯಲಿದೆ.

25 ರಿಕ್ಷಾಗಳಿಗೆ ಪ್ರಾಯೋಗಿಕ ಜಾರಿ
ಮಂಗಳೂರಿನಲ್ಲಿ ಈಗಾಗಲೇ 6500 ಕ್ಕಿಂತ ಅಧಿಕ ರಿಕ್ಷಾಗಳಿವೆ. ಈ ಪೈಕಿ 800 ಕ್ಕೂ ಅಧಿಕ ರಿಕ್ಷಾಗಳ ಚಾಲಕರು 'ಕುಡ್ಲ ಸೌಹಾರ್ದ ಸಹಕಾರಿ ಸಂಘ'ದ ಸದಸ್ಯರಾಗಿದ್ದಾರೆ. ಈಗಾಗಲೇ 25 ರಿಕ್ಷಾಗಳಿಗೆ ಪ್ರಾಯೋಗಿಕವಾಗಿ ಟ್ಯಾಬ್ ಅಳವಡಿಸಲಾಗಿದ್ದು, ಉಳಿದ ರಿಕ್ಷಾಗಳಿಗೆ ಮುಂದಿನ ದಿನಗಳಲ್ಲಿ ಟ್ಯಾಬ್ ಅಳವಡಿಸಲಾಗುತ್ತದೆ.
ಮಂಗಳೂರು ಪ್ರಗತಿಯ ಪಥದಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ಈ ಟ್ಯಾಬ್ ಅಳವಡಿಕೆ ಉದಾಹರಣೆ. ಈ ಹೊಸ ಕ್ರಮದಿಂದ ಪ್ರವಾಸೋದ್ಯಮ ಕೂಡ ಬೆಳೆಯಲು ಸಹಕಾರಿಯಾಗುತ್ತದೆ.












Click it and Unblock the Notifications