ಮಂಗಳೂರು ಪೊಲೀಸ್ ಅಧಿಕಾರಿಗಳ ಮೇಲೆ ಸಾರ್ವಜನಿಕರು ಗರಂ
ಮಂಗಳೂರು, ಜುಲೈ 6: ಆರೆಸ್ಸೆಸ್ ಕಾರ್ಯಕರ್ತ ಹಾಗೂ ಲಾಂಡ್ರಿ ಮಾಲೀಕ ಶರತ್ (28) ಮೇಲೆ ಬಿ.ಸಿ. ರೋಡ್ ಹೆದ್ದಾರಿ ಬದಿ ತಲವಾರಿನಿಂದ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರಿನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಇದೀಗ ಶೀಘ್ರ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಸಂಘ ಪರಿವಾರ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದೆ.
ಸಿಆರ್'ಪಿಸಿ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಯಲ್ಲಿರುವ ಸಂದರ್ಭದಲ್ಲೇ ಬಂಟ್ವಾಳ ನಗರ ಠಾಣೆಯ ಕೂಗಳತೆ ದೂರದಲ್ಲಿ ಘಟನೆ ನಡೆದಿದೆ. ಮತ್ತು ಎರಡು ಬಾರಿಯೂ ಶಾಂತಿ ಸಭೆ ನಡೆಸಿದ ಬೆನ್ನಲ್ಲೇ ಮಾರಣಾಂತಿಕ ದಾಳಿ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿವೆ.

ನೀವು ಪಾತಾಳದಲ್ಲೇ ಅಡಗಿದ್ದರೂ ಹುಡುಕಿ ತರುವೆ, ಗಾಂಜಾ ಅಡ್ಡೆಯನ್ನು ಮಟ್ಟ ಹಾಕುವೆ, ಯಾರನ್ನೂ ಕೇರ್ ಮಾಡುವುದಿಲ್ಲ ಎಂದು ಕೆಲ ದಿನಗಳ ಹಿಂದೆಯಷ್ಟೇ ಬ್ರಹ್ಮರಕೂಟ್ಲುವಿನ ಬಂಟರ ಭವನದಲ್ಲಿ ಐಜಿಪಿ ಹರಿಶೇಖರನ್ ಅಬ್ಬರಿಸಿದ್ದರು. ದುಷ್ಕೃತ್ಯ ಎಸಗುವ ಮನೋಭಾವದ ಶೇ.01ರಷ್ಟೇ ಇರುವ ಕ್ರಿಮಿನಲ್‌ಗಳನ್ನು ಉದ್ದೇಶಿಸಿ ಖಡಕ್ ಸಂದೇಶ ನೀಡಿದ್ದರು ಹರಿಶೇಖರನ್.
ಜೂನ್ 21ರಂದು ಅಶ್ರಫ್ ಹತ್ಯೆಯಾದ ಮರುದಿನ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಮತ್ತು ಹತ್ಯೆ ಆರೋಪಿಗಳನ್ನು ಹಿಡಿದ ಸಂದರ್ಭ ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲೂ ಅವರು ಕ್ರಿಮಿನಲ್ ಗಳನ್ನು ಮಟ್ಟ ಹಾಕುತ್ತೇವೆ, ರೌಡಿಶೀಟರ್ ತೆರೆಯುತ್ತೇವೆ, ಡ್ರಗ್ ಮಾಫಿಯಾ ಇನ್ನಿಲ್ಲವಾಗಿಸುತ್ತೇವೆ ಎಂದು ಗುಡುಗಿದ್ದರು. ಕಲ್ಲಡ್ಕದಲ್ಲಿ ಅಹಿತಕರ ಘಟನೆ ಎರಡನೇ ಬಾರಿ ನಡೆದ ಕೆಲ ದಿನಗಳಲ್ಲೇ ಶಾಂತಿ ಸಭೆಯನ್ನು ಕರೆದಿದ್ದ ಜಿಲ್ಲಾಧಿಕಾರಿ ಮತ್ತು ಅಂದಿನ ಎಸ್ಪಿ ಡ್ರಗ್ ಮಾಫಿಯಾವನ್ನು ಮಟ್ಟ ಹಾಕುವ ಹಾಗೂ ಕ್ರಿಮಿನಲ್‌ಗಳಿಂದ ಅಂಗಡಿ ಮುಂಗಟ್ಟು ನಡೆಸುವವರಿಗೆ ರಕ್ಷಣೆ ನೀಡುವ ಮಾತನಾಡಿದ್ದರು.
ಆದರೆ, ಎರಡೂ ಶಾಂತಿಸಭೆಗಳು ನಡೆದ ಬೆನ್ನಲ್ಲೇ ಮಾರಣಾಂತಿಕ ದಾಳಿ ನಡೆದಿದ್ದು ಹಾಗೂ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಇದ್ದರೂ ಕ್ರಿಮಿನಲ್ ಚಟುವಟಿಕೆ ನಡೆಸುವವರು ಯಾವುದೇ ಭೀತಿ ಇಲ್ಲದೆ ಅಪರಾಧ ಚಟುವಟಿಕೆ ನಡೆಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ತಂದಿದೆ.
ಇತ್ತೀಚಿನ ದಿನಗಳಲ್ಲಿ ಅಪರಾಧ ಚಟುವಟಿಕೆ ನಡೆಸುವವರು ಮಾದಕ ದ್ರವ್ಯ ಸೇವಿಸುವ ಗುಮಾನಿಯನ್ನು ಖುದ್ದು ಪೊಲೀಸರೇ ವ್ಯಕ್ತಪಡಿಸಿದ್ದರು. ಆದರೆ ಅದರ ಮೂಲಬೇರುಗಳನ್ನು ಕಂಡುಹಿಡಿಯಲು ವಿಳಂಬವಾಗಿರುವುದೂ ಕ್ರಿಮಿನಲ್ ಗಳಿಗೆ ವರದಾನವಾಗಿದೆ.












Click it and Unblock the Notifications