ನರೇಂದ್ರ ಮೋದಿ ಮೇಲೆ ಅಡ್ವಾಣಿ, ಜೋಷಿ ಶಾಪ!
ಮಂಗಳೂರು, ಏ 10: ಪಕ್ಷದ ಹಿರಿಯ ಮುಖಂಡರಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರನ್ನು ನರೇಂದ್ರ ಮೋದಿ ಕಡೆಗಣಿಸುತ್ತಿದ್ದಾರೆ. ಇವರಿಬ್ಬರ ಶಾಪ ಮೋದಿ ಮೇಲಿದೆ ಎಂದು ಕಾಂಗ್ರೆಸ್ ಮುಖಂಡ ಸಿ ಎಂ ಇಬ್ರಾಹಿಂ ಆರೋಪಿಸಿದ್ದಾರೆ.
ನಗರದಲ್ಲಿ ಬುಧವಾರ (ಏ 9) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ಪರ ಮತಯಾಚಿಸುತ್ತಾ ಮಾತನಾಡುತ್ತಿದ್ದ ಇಬ್ರಾಹಿಂ, ಸರ್ವಾಧಿಕಾರಿಯಂತೆ ಮೆರೆಯುತ್ತಿರುವ ಮೋದಿ ಬಿಜೆಪಿಯ ಎಲ್ಲಾ ನಾಯಕರುಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಹಿರಿಯರ ಶಾಪ ಇವರಿಗೆ ತಟ್ಟದೇ ಇರುತ್ತದೆಯೇ. ಹಾಗಾಗಿ ಇವರು ಪ್ರಧಾನಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಅವರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಈ ವಾಸ್ತವಾಂಶ ಅರಿತ ಮೇಲೆ ರಾಜ್ಯ ಬಿಜೆಪಿ ಮುಖಂಡರು ನರೇಂದ್ರ ಮೋದಿ ಹಿಂದೆ ಬಿದ್ದಿದ್ದಾರೆ. ಮೋದಿ ವಾರಕ್ಕೆ ಮೂರು ದಿನ ಬಂದು ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದಾರೆಂದು ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ಚುನಾವಣೆಯಲ್ಲಿ ಜನರಿಗೆ ನೀಡಿದ ಆಶ್ವಾಸನೆಯಂತೆ ಸಿದ್ದರಾಮಯ್ಯ ಜನಪರ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಅವರ ಸರಕಾರದ ಬಗ್ಗೆ ಯಾರಿಗೂ ಅಭದ್ರತೆಯ ಸಂಶಯ ಬೇಡ. ಚುನಾವಣೆಯ ನಂತರ ಸಿದ್ರಾಮಣ್ಣ ರಾಜೀನಾಮೆ ನೀಡುತ್ತಾರೆನ್ನುವುದು ಬೇರೆ ಕೆಲಸವಿಲ್ಲದ ವಿರೋಧ ಪಕ್ಷದವರ ಕೆಲಸ ಎಂದು ಇಬ್ರಾಹಿಂ ಹೇಳಿದ್ದಾರೆ.
ಬಿಜೆಪಿಯವರಿಗೆ ಹಿಂದುಳಿದ ವರ್ಗದವರ ಮೇಲೆ ಕಾಳಜಿಯಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ಅವರಿಗೆ ಹಿಂದುಳಿದ ವರ್ಗದವರ ನೆನಪಾಗುವುದು. ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಲೋಕಸಭೆಯಲ್ಲಿ ಬಿಜೆಪಿ ವಿರೋಧಿಸುತ್ತದೆ. ಇದು ಇದು ಬಿಜೆಪಿಯ ನಿಜವಾದ ಬಣ್ಣ ಎಂದು ಇಬ್ರಾಹಿಂ ಕಿಡಿಕಾರಿದ್ದಾರೆ.
ಸಂಸ್ಕೃತಿ ಬಗ್ಗೆ ಮಾತನಾಡುವ ಭಟ್ರೇ, ವಿಧಾನಸಭೆಯಲ್ಲಿ ನೀಲಿ ಚಿತ್ರ ನೋಡುವುದು ನಿಮ್ಮ ಸಂಸ್ಕೃತಿಯೇ? ಸಾಲು ಸಾಲು ನಿಮ್ಮ ಸಚಿವರುಗಳು ಜೈಲಿಗೆ ಹೋದರಲ್ಲಾ ಅದು ನಿಮ್ಮ ಸಂಸ್ಕೃತಿಯೇ ಎಂದು ಇಬ್ರಾಹಿಂ, ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಪ್ರಶ್ನಿಸಿದ್ದಾರೆ.












Click it and Unblock the Notifications