'ಕೈ' ತಪ್ಪಿದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ:ಬಿಜೆಪಿ ಪಾಳಯದಲ್ಲಿ ಹರ್ಷ
ಉಡುಪಿ, ಮಾರ್ಚ್ 14: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸೀಟು ಹಂಚಿಕೆ ಲೆಕ್ಕಾಚಾರದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಕೈ ತಪ್ಪಿದೆ. ಕ್ಷೇತ್ರದಲ್ಲಿ ಅಷ್ಟೇನು ಹಿಡಿತ ವಿಲ್ಲದ ಜೆಡಿಎಸ್ ಗೆ ಈ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದು ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ತುಲನೆ ಮಾಡಿದರೆ ಕಾಂಗ್ರೆಸ್ ಬಲಿಷ್ಟವಾಗಿದೆ. ಬಿಜೆಪಿಗೆ ಸಮಾನ ಪೈಪೋಟಿ ನೀಡುವ ಶಕ್ತಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಮಾತ್ರ ಇದೆ. ಆದರೂ ಇದನ್ನು ಕಡೆಗಣಿಸಿ ಕ್ಷೇತ್ರವನ್ನು ಜೆಟಿಎಸ್ ಗೆ ಬಿಟ್ಟು ಕೊಟ್ಟಿರುವುದಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಆಕ್ಷೇಪ ಕೇಳಿಬಂದಿದೆ.
ಪಕ್ಷದ ಈ ತೀರ್ಮಾನ ಒಂದೆಡೆ ಕೈ ನಾಯಕರಿಗೆ ನಿರಾಸೆ ಮೂಡಿಸಿದರೆ, ಮತ್ತೊಂದೆಡೆ ಬಿಜೆಪಿ ಪಾಳಯದಲ್ಲಿ ಹರ್ಷ ಮೂಡಿಸಿದೆ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಕರೆದ ಸಭೆಯಲ್ಲಿ ಕ್ಷೇತ್ರವನ್ನು ಬಿಟ್ಟುಕೊಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಬಿಜೆಪಿಯನ್ನು ದೂರ ಇಡಲು ಮೈತ್ರಿ ತಾತ್ಕಾಲಿಕ. ಆದರೆ ದೂರ ದೃಷ್ಠಿಯಿಂದ ಕಾಂಗ್ರೆಸ್ ಗೆ ಭಾರೀ ನಷ್ಟ . ಈ ನಷ್ಟವನ್ನು ಸರಿದೂಗಿಸಲು ಭವಿಷ್ಯದಲ್ಲಿ ಸಾಕಷ್ಟು ಹೆಣಗಾಡಬೇಕಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂದಿದೆ.
ಜಿಲ್ಲೆಯಲ್ಲಿ ಒಂದೇ ಒಂದು ಪ್ರಮುಖ ಜನಪ್ರತಿನಿಧಿಗಳಿಲ್ಲದ ಜೆಡಿಎಸ್ ಗೆ ಬಿಟ್ಟುಕೊಡುವುದರಲ್ಲಿ ಏನು ಅರ್ಥವಿದೆ? ಎಂದು ಸಭೆಯಲ್ಲಿ ಮುಖಂಡರುಗಳು ಪ್ರಶ್ನಿಸಿದರೆ, ಉಡುಪಿ - ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ಪಾಲಾಗಿರುವುದಕ್ಕೆ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ.
ಈ ನಿರ್ಧಾರ ಬಿಜೆಪಿ ಅಭ್ಯರ್ಥಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸಿದೆ. 2009ರ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಿರಲಿಲ್ಲ. ಈ ಬಾರಿ ಭೋಜೇಗೌಡರೇ ಅಭ್ಯರ್ಥಿಯಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ಆದರೆ ಅಧಿಕೃತಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಅ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಕುತೂಹಲ ಮೂಡಿಸಿದೆ.












Click it and Unblock the Notifications