ಮಂಗಳೂರು : ಖಾಸಗಿ ಬಸ್, ಆಟೋ ದರದ ಬಗ್ಗೆ ಗೊಂದಲ
ಮಂಗಳೂರು, ಜ.16 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೆ, ಬಸ್ಸಿನ ಮಾಲೀಕರು ಇದನ್ನು ಪಾಲಿಸುತ್ತಿಲ್ಲ. ಆಟೋ ದರ ಕಡಿಮೆಯಾಗಿದ್ದರೂ ಚಾಲಕರು ನೂತನ ದರವನ್ನು ತೆಗೆದುಕೊಳ್ಳುತ್ತಿಲ್ಲ, ಅವರ ಇಚ್ಛೆಯಂತೆ ದರ ವಸೂಲಿ ಮಾಡುತ್ತಿದ್ದಾರೆ.
ಜನವರಿ 12ರಿಂದಲೇ ಜಾರಿಯಾಗುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಖಾಸಗಿ ಬಸ್ ದರವನ್ನು ಇಳಿಸಿ ಆದೇಶ ಹೊರಡಿಸಿದ್ದರು. ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳಿಗೆ 2014ರ ಪರಿಷ್ಕೃತ ದರ ರದ್ದುಪಡಿಸಿ 2013ರಲ್ಲಿದ್ದ ದರ ನಿಗದಿ ಮಾಡಲಾಗಿತ್ತು. [ಮಂಗಳೂರು : ಖಾಸಗಿ ಬಸ್ ಪ್ರಯಾಣದರ ಕಡಿತ]

2013ರಲ್ಲಿ ನಿಗದಿಪಡಿಸಿದ್ದ ದರದಂತೆ ಗ್ರಾಮಾಂತರ ಮತ್ತು ಸಿಟಿ ಬಸ್‌ಗಳಲ್ಲಿ 4 ಕಿ.ಮೀ. ವ್ಯಾಪ್ತಿಯೊಳಗೆ 7 ರೂ. ದರ ತೆಗೆದುಕೊಳ್ಳಬೇಕಿತ್ತು. ಆದರೆ, ಕೆಲವು ಬಸ್ಸುಗಳಲ್ಲಿ ನಿರ್ವಾಹಕರು ಕೆಲವು ದಿನ 7 ರೂ. ಕೆಲವು ದಿನ 9 ರೂ. ದರವನ್ನು ಪಡೆಯುತ್ತಿದ್ದು, ಜನರು ಗೊಂದಲಕ್ಕೆ ಸಿಲುಕಿದ್ದಾರೆ. [ಬಸ್ ದರ ಕಡಿತ : ಯಾವ ನಗರಗಳಿಗೆ ಎಷ್ಟು ರೂ.]
ಖಾಸಗಿ ಬಸ್ಸುಗಳಲ್ಲಿ ಪ್ರತಿದಿನ ಪ್ರಯಾಣಿಸುವ ಜನರು ಹೇಳುವಂತೆ ದಿನಕ್ಕೊಂದು ದರವನ್ನು ನಿರ್ವಾಹಕರು ಪಡೆಯುತ್ತಿದ್ದಾರೆ. ಒಮ್ಮೆ 7 ರೂ. ತೆಗೆದುಕೊಂಡರೆ ಮರುದಿನ ಅದೇ ಬಸ್‌ನಲ್ಲಿ ಅದೇ ದೂರಕ್ಕೆ 9 ರೂ.ಗಳನ್ನು ಪಡೆಯಾಗುತ್ತಿದೆ ಇದರಿಂದ ಗೊಂದಲ ಉಂಟಾಗಿದೆ ಎಂದು ಹೇಳಿದ್ದಾರೆ. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]
ಪ್ರಯಾಣ ದರವನ್ನು ಏರಿಕೆ ಮಾಡಿದರೆ ಬಸ್ಸುಗಳು ದರ ಪಟ್ಟಿಯನ್ನು ಹಾಕುತ್ತಿದ್ದರು. ಆದರೆ, ಇಳಿಕೆಯಾದ ನಂತರ ಯಾವುದೇ ಬಸ್‌ಗಳಲ್ಲಿ ದರಪಟ್ಟಿ ಅಳವಡಿಸಲಾಗಿಲ್ಲ. ಆದ್ದರಿಂದ ಜನರಿಗೆ ಎಷ್ಟು ದೂರಕ್ಕೆ ಎಷ್ಟು ರೂ. ಹಣ ಪಾವತಿ ಮಾಡಬೇಕು ಎಂಬುದು ಗೊಂದಲ ಮೂಡಿಸಿದೆ.
ಆಟೋದರವು ಇಳಿಕೆಯಾಗಿಲ್ಲ : ಖಾಸಗಿ ಬಸ್ಸುಗಳು ಮಾತ್ರವಲ್ಲ ಆಟೋಗಳಲ್ಲಿಯೂ ಈ ಸಮಸ್ಯೆ ಇದೆ. ಆಟೋದಲ್ಲಿ ಕನಿಷ್ಠ ದರ ಮೊದಲಿನ 25 ರೂ.ಗಳಲ್ಲಿ 5 ರೂ. ಇಳಿಕೆ ಮಾಡಲಾಗಿದೆ. ಆದರೆ, ಆಟೋ ಚಾಲಕರು 25 ರೂ. ವಸೂಲಿ ಮಾಡುತ್ತಿದ್ದಾರೆ.












Click it and Unblock the Notifications