ನೈತಿಕತೆಗೆ ಧಕ್ಕೆಯಾದಾಗ ಆಕ್ಷನ್, ರಿಯಾಕ್ಷನ್ ಆಗುತ್ತದೆ; ನೈತಿಕ ಪೊಲೀಸ್‌ಗಿರಿ ಸಮರ್ಥಿಸಿದ ಸಿಎಂ!
ಮಂಗಳೂರು, ಅಕ್ಟೋಬರ್ 13: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದೂ ಸಂಘಟನೆಗಳ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. "ನೈತಿಕತೆಗೆ ಧಕ್ಕೆಯಾದಾಗ ಆಕ್ಷನ್, ರಿಯಾಕ್ಷನ್ ಆಗುತ್ತದೆ," ಅಂತಾ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, "ನೈತಿಕ ಪೊಲೀಸ್‌ಗಿರಿ, ಇದು ಬಹಳ ಸೂಕ್ಷ್ಮವಾಗಿರುವ ವಿಚಾರ. ಸಮಾಜದಲ್ಲಿ ನಾವೆಲ್ಲರೂ ಜವಾಬ್ದಾರಿ ಹೊಂದಬೇಕಾಗುತ್ತದೆ. ಸಮಾಜದಲ್ಲಿ ಹಲವಾರು ಭಾವನೆಗಳ ಜನರಿದ್ದಾರೆ. ಈ ಭಾವನೆಗಳಿಗೆ ಧಕ್ಕೆ ಆಗದ ಹಾಗೆ ನಾವು ನಡೆದುಕೊಳ್ಳಬೇಕಾಗುತ್ತದೆ. ಆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಮತ್ತು ರಿಯಾಕ್ಷನ್ ಆಗುತ್ತದೆ," ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
"ಕಾನೂನನ್ನು ಕಾಪಾಡುವ ಜೊತೆಗೆ ಸಾಮಾಜಿಕ ಸಾಮರಸ್ಯ ಕಾಪಾಡುವುದು ಸರ್ಕಾರದ ಕರ್ತವ್ಯ. ಯುವಕರು ಕೂಡ ಸಾಮಾಜಿಕವಾಗಿ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ನೈತಿಕತೆ ಅನ್ನುವುದು ಸಮಾಜದಲ್ಲಿ ಬೇಕಲ್ವಾ? ನೈತಿಕತೆ ಇಲ್ಲದೆ ಬದುಕುವುದಕ್ಕೆ ಆಗುತ್ತಾ? ನಾವು ನೈತಿಕತೆ ಇಲ್ಲದೆ ಬದುಕುವುದಕ್ಕೆ ಆಗಲ್ಲ. ನಮ್ಮೆಲ್ಲ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ಇರುವುದು ನಮ್ಮ ನೈತಿಕತೆ ಮೇಲೆ. ಇದು ಇಲ್ಲದಾಗ ಆಕ್ಷನ್ಸ್, ರಿಯಾಕ್ಷನ್ಸ್ ಅಗುತ್ತದೆ," ಎಂದು ಮಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವ್ಯಾಖ್ಯಾನ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಮೂಡಬಿದಿರೆಯಲ್ಲಿ ಅನ್ಯಧರ್ಮದ ದಂಪತಿಗಳು ಇಬ್ಬರು ಯುವತಿರನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಡ್ಡಗಟ್ಟಿದ್ದ ಭಜರಂಗದಳದ ಕಾರ್ಯಕರ್ತರು, ದಂಪತಿ ಮತ್ತು ಯುವತಿಯರಿಗೆ ಅಗೌರವ ತರುವಂತೆ ವರ್ತನೆ ಮಾಡಿದ್ದರು. ಈ ಪ್ರಕರಣ ಸಂಬಂಧ ಸಮಿತ್ ರಾಜ್ ಮತ್ತು ಸಂದೀಪ್ ಪೂಜಾರಿ ಎಂಬ ಕಾರ್ಯಕರ್ತರನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದರು.
ಆದರೆ, ಬಂಧನವಾದ 24 ಗಂಟೆಯೊಳಗೆ ಆರೋಪಿಗಳಿಗೆ ಜಾಮೀನು ಲಭ್ಯವಾಗಿದ್ದು, ಆರೋಪಿಗಳನ್ನು ಠಾಣೆಯಿಂದ ಬಿಡಿಸಿಕೊಂಡು ಬರಲು ಸ್ವತಃ ಮೂಡಬಿದಿರೆಯ ಶಾಸಕ ಉಮಾನಾಥ್ ಕೋಟ್ಯಾನ್ ಹೋಗಿದ್ದರು. ಶಾಸಕರ ನಡೆಯ ಬಗ್ಗೆ ತೀವ್ರ ಟೀಕೆ ವ್ಯಕ್ಯವಾಗಿತ್ತು. ಈಗ ಸಿಎಂ ಬಸವರಾಜ ಬೊಮ್ಮಾಯಿ ಘಟನೆಯನ್ನು ಸಮರ್ಥಿಸುವ ಮೂಲಕ ಪ್ರತಿಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ.
ಇನ್ನು, "ರಾಜ್ಯದಲ್ಲಿ ಕಲ್ಲಿದ್ದಲು ಅಭಾವದ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಕಲ್ಲಿದ್ದಲು ಅಭಾವದ ಆತಂಕ ಇರುವುದು ನಿಜ. ಕಳೆದ ವಾರ ರಾಜ್ಯಕ್ಕೆ ಕೇಂದ್ರದಿಂದ ಎಂಟು ರೇಖ್ ಕಲ್ಲಿದ್ದಲು ಬರುತಿತ್ತು. ಆದರೆ ಈಗ ಸ್ವಲ್ಪ ಅಭಾವವಾಗಿದೆ. ಇನ್ನೂ ಮೂರು ರೇಖ್ ಕಲ್ಲಿದ್ದಲು ಬಂದರೆ ಹೆಚ್ಚು ಅನುಕೂಲವಾಗುತ್ತದೆ. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಕೇಂದ್ರ ಕಲ್ಲಿದ್ದಲು ಸಚಿವರ ಜೊತೆ ಈ ಕುರಿತು ಮಾತನಾಡಿದ್ದೇವೆ," ಅಂತಾ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಇನ್ನು ಕೋವಿಡ್ ನಿಯಾಮವಳಿಗಳನ್ನು ಸಡಿಲಗೊಳಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, "ದಸರಾ ಮುಗಿದ ಬಳಿಕ ಕೊರೊನಾ ನಿಯಂತ್ರಣದ ಬಗ್ಗೆ ತಜ್ಞರ ಸಭೆ ಕರೆದಿದ್ದೇವೆ. ಕೇರಳ- ಕರ್ನಾಟಕ ಗಡಿ ಭಾಗದಲ್ಲಿ ನಿಯಮ ತೆರವಿನ ಬಗ್ಗೆಯೂ ಚರ್ಚೆ ಮಾಡುತ್ತೇವೆ. ಗಡಿ ಜಿಲ್ಲೆಗಳಲ್ಲಿ ಕೋವಿಡ್ ಸ್ಥಿತಿಗತಿ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರಾರ್ಥಮಿಕ ಶಾಲೆಯನ್ನು ಆರಂಭಿಸುವ ಬಗ್ಗೆಯೂ ಚಿಂತನೆ ನಡೆಸುತ್ತೇವೆ," ಅಂತಾ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
"ಕರ್ನಾಟಕಕ್ಕೆ ಹೊಂದಿಕೊಂಡಿರುವ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಇರುವ ಕೋವಿಡ್ ಪರಿಸ್ಥಿತಿ ಬಗ್ಗೆ ತಜ್ಞರು ಮೌಲ್ಯಮಾಪನ ಮಾಡುತ್ತಿದ್ದಾರೆ. ದಸರಾ ಹಬ್ಬದ ಬಳಿಕ ಕೋವಿಡ್ ತಜ್ಞರ ಸಭೆ ಕರೆಯಲಾಗುವುದು. ಗಡಿ ಜಿಲ್ಲೆಗಳಲ್ಲಿ ಈಗಿರುವ ನಿರ್ಬಂಧಗಳನ್ನು ಸಡಿಲಮಾಡುವ ಕುರಿತು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವ ಸಂಬಂಧವೂ ತಜ್ಞರ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗುವುದು."
"2 ವರ್ಷದಿಂದ 18 ವರ್ಷಗಳ ವಯೋಮಾನದವರಿಗೆ ಕೋವಿಡ್ ಲಸಿಕೆ ಹಾಕುವ ಕುರಿತು ಪ್ರಯೋಗ ಕೊನೆ ಹಂತದಲ್ಲಿದೆ. ಅದಕ್ಕೆ ಎಲ್ಲಾ ರೀತಿಯ ಒಪ್ಪಿಗೆ ದೊರೆತ ತಕ್ಷಣ ಮಕ್ಕಳು ಮತ್ತು ಯುವ ವಯಸ್ಕರಿಗೆ ಲಸಿಕೆ ಹಾಕಲಾಗುವುದು. ಒಟ್ಟಾರೆ ಕೋವಿಡ್ ಲಸಿಕೆ ಹಾಕುವುದರಲ್ಲಿ ಕರ್ನಾಟಕ ಮುಂದಿದೆ," ಎಂದು ತಿಳಿಸಿದರು.












Click it and Unblock the Notifications