ಏಷ್ಯಾದಲ್ಲಿ ಭಾರತವನ್ನು ದೈತ್ಯ ಶಕ್ತಿ ರಾಷ್ಟ್ರ ಮಾಡೋದು ನರೇಂದ್ರ ಮೋದಿಯವರ ಗುರಿ: ಚಕ್ರವರ್ತಿ ಸೂಲಿಬೆಲೆ
ಮಂಗಳೂರು, ಜುಲೈ, 17: ಸದ್ಯ ಚೀನಾ ಏಷ್ಯಾ ಖಂಡದ ದೈತ್ಯ ಶಕ್ತಿಯಾಗಿದೆ. ಭಾರತ ಏಷ್ಯಾದ ದೈತ್ಯ ರಾಷ್ಟ್ರವಾಗಿ ಬೆಳೆಯುವುದೇ ಪ್ರಧಾನಿ ಮೋದಿಯವರ ಮುಂದಿನ ಗುರಿಯಾಗಿದೆ. ಅದಕ್ಕಾಗಿ ಮೋದಿಯವರನ್ನು 2024ರ ಚುನಾವಣೆಯಲ್ಲಿ ಮತ್ತೆ ಪ್ರಧಾನಿಯಾಗಿಸುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ನಮೋ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ಮಂಗಳೂರಿನಲ್ಲಿ ಆಗ್ರಹಸಿದ್ದಾರೆ.
ಮಂಗಳೂರಿನ ಡೊಂಗರಕೇರಿಯ ಭುವನೇಂದ್ರ ಸಭಾಂಗಣದಲ್ಲಿ ತಮ್ಮ ನೂತನ ಕೃತಿ ಮೋದಿ ಫಾರಿನ್ ಟ್ರಿಪ್ಪು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸೂಲಿಬೆಲೆ ಅವರು, ಮೋದಿಯವರ ವಿದೇಶಾಂಗ ನೀತಿಯನ್ನು ಮಹಾಭಾರತದ ದೃಷ್ಣಾಂತಗಳೊಂದಿಗೆ ವಿವರಿಸಿ ನಮ್ಮ ರಾಜಕೀಯ ಸಂಸ್ಕೃತಿ ಹಿಂಸೆಯ ಮಾರ್ಗದಲ್ಲಿ ನಡೆಯುವುದಲ್ಲ. ಹಾಗಂತ ನೆಹರೂ ಕಾಲದ ರಾಜಕೀಯ ಸಂಸ್ಕೃತಿಯೂ ಅಲ್ಲ. ನಮ್ಮ ಮೇಲೆ ಕಾಲು ಕೆರೆದು ಜಗಳ ಮಾಡಿದರೆ ಅದಕ್ಕೆ ಅವರದ್ದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡುವ ಸರ್ಕಾರ ರಾಷ್ಟ್ರದಲ್ಲಿದೆ ಎಂದು ಹೇಳಿದರು.

ವಿದೇಶ ಪ್ರವಾಸದಲ್ಲಿ ಸಾವಿರಾರು ಅನಿವಾಸಿ ಭಾರತೀಯರು ಮೋದಿಯವರ ಮಾತುಗಳಿಗಾಗಿ ಕಾಯುತ್ತಾರೆ. ಅಂತಾರಾಷ್ಟ್ರೀಯ ಕಂಪನಿಗಳು ಮೋದಿಯವರೊಂದಿಗೆ ಸಭೆ ನಡೆಸಿ ಭಾರತದಲ್ಲಿ ಬಂಡವಾಳ ಹೂಡಲು ಕಾತರಿಸುತ್ತಿವೆ. ಮೋದಿಯವರು ಅಮೇರಿಕಾ ಸಂಸತ್ತಿನಲ್ಲಿ ಎರಡು ಬಾರಿ ಭಾಷಣ ಮಾಡಿದ ಏಕೈಕ ಭಾರತೀಯ ಪ್ರಧಾನಿ ಆಗಿದ್ದಾರೆ ಎಂದರು.
ಇನ್ನು ಮನಮೋಹನ್ ಸಿಂಗ್ ಅವರಿಗೆ ಹೋಲಿಸಿದರೆ ಮೋದಿಯವರು ಕಡಿಮೆ ಖರ್ಚಿನಲ್ಲಿ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿ ಹೆಚ್ಚು ಒಪ್ಪಂದ ಮಾಡಿ ದೇಶಕ್ಕೆ ಲಾಭ ಮಾಡಿದ್ದಾರೆ. ಅದರಲ್ಲೂ ಮಹಾಮಾರಿ ಕೊರೊನಾ ಅವಧಿಯಲ್ಲಿ 150 ರಾಷ್ಟ್ರಗಳಿಗೆ ಕೊರೊನಾ ಲಸಿಕೆ, ಔಷಧಿ ಪೂರೈಸಿ ಅಸಂಖ್ಯಾತ ಜನರ ಜೀವ ಉಳಿಸಿದ್ದಾರೆ ಎಂದರು.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ, ಆರ್ಟಿಕಲ್ 370 ರದ್ದು, ತ್ರಿವಳಿ ತಲಾಕ್ ನಿಷೇಧ ಸಹಿತ ಈಗ ಏಕರೂಪ ನಾಗರಿಕ ಸಂಹಿತೆ ತರಲು ಅಣಿಯಾಗಿದ್ದಾರೆ. ಇದರಿಂದ ಮುಸಲ್ಮಾನ ಸಮುದಾಯದ ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರಯೋಜನ ಆಗಲಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿ ಬಂಗಾರಡ್ಕ ವಿಶ್ವೇಶ್ವರ ಭಟ್ ಮಾತನಾಡಿ, ಮೋದಿಯವರಿಗೆ ಜನರ ನಾಡಿಮಿಡಿತ ಏನೆಂದು ಗೊತ್ತಿದೆ. ಜನರ ಆಶೋತ್ತರಗಳ ಬಗ್ಗೆ ಅರಿವಿದೆ. ಆಂತರಿಕ ಭದ್ರತೆ, ವಿದೇಶಾಂಗ ನೀತಿ, ರಕ್ಷಣೆಯ ಸ್ಪಷ್ಟ ಕಲ್ಪನೆ ಇದೆ. ಹಿಂದಿನ ಪ್ರಧಾನಿಗಳ ವೈಫಲ್ಯಗಳು ಮೋದಿಯವರ ಕಾಲದಲ್ಲಿ ಪುನರಾವರ್ತನೆ ಆಗಿಲ್ಲ ಎಂದು ಹೇಳಿದರು.












Click it and Unblock the Notifications