ರೈಲಿನ ಮೇಲೆ ವಿಶ್ವಾಸವಿಟ್ಟು ಮೋಸ ಹೋದೆ ಅಂದ ಯೋಧ
ಮಂಗಳೂರು, ಜುಲೈ. 11 : ಬಿಎಸ್ಎಫ್ ಯೋಧ ತನ್ನೂರಿಗೆ ಬರುವಾಗ ರೈಲಿನಲ್ಲಿ 3 ಪಾರ್ಸೆಲ್ ತಂದಿದ್ದರು. ಅದು ತಿಂಗಳಾದರೂ ಊರು ತಲುಪಿಲ್ಲ ಎಂದರೆ ನಂಬುತ್ತೀರಾ? ಆಶ್ಚರ್ಯವಾದರೂ ಇದು ಸತ್ಯ. ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಪಿದಪಟ್ಲ ನಿವಾಸಿ ಮಹೇಶ್ ಪಿ. ಅವರೇ ಪಾರ್ಸೆಲ್ ಕಳೆದುಕೊಂಡವರು.
ಕಳೆದ 9 ವರ್ಷಗಳಿಂದ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹೇಶ್ ಪಿ. 2015ರ ಏ.14ರಂದು ರಾಜಸ್ತಾನದ ಬಿಕನೇರ್ ನಿಂದ ಮಂಗಳೂರಿಗೆ ಬರುವಾಗ 2 ಪಾರ್ಸೆಲ್ ಗಳನ್ನು ಬುಕ್ ಮಾಡಿದ್ದರು. ಒಂದು ಪಾರ್ಸೆಲ್ ನಲ್ಲಿ ದ್ವಿಚಕ್ರ ವಾಹನ, ಮತ್ತೊಂದರಲ್ಲಿ ಕಂಪ್ಯೂಟರ್ ಸೇರಿದಂತೆ ಮನೆಗೆ ಬೇಕಾದ ವಸ್ತುಗಳಿದ್ದವು. ರೈಲಿನಿಂದ ಇಳಿಯುವಾಗ ಅವರ ಜೊತೆಯಲ್ಲೇ ಪಾರ್ಸೆಲ್ ಗಳೂ ಇಳಿಬೇಕಿತ್ತು. ದುರಂತವೆಂದರೆ ಹಾಗೆ ಆಗಿಲ್ಲ.[ರಾಜ್ಯದ 19 ರೈಲು ನಿಲ್ದಾಣಗಳಲ್ಲಿ ಕನ್ನಡ ಡಿಂಡಿಮ]

ಪಾರ್ಸೆಲ್ ನ್ನು ಮಂಗಳೂರಿನಲ್ಲಿ ಇಳಿಸಲು ಸಿಬ್ಬಂದಿ ನಿರಾಕರಿಸಿದರು. ಬಾಕ್ಸ್ ದೊಡ್ಡದಿರುವ ಕಾರಣ ಅದು ಕಣ್ಣೂರಿಗೆ ಹೋಗಿ ಅಲ್ಲಿಂದ ಬೇರೆ ರೈಲಿನಲ್ಲಿ ಬರುತ್ತದೆ. ನಿಮಗೆ ಫೋನ್ ಬಂದ ಮೇಲೆ ಕಲೆಕ್ಟ್ ಮಾಡಿಕೊಳ್ಳಿ ಎಂದರು. ದ್ವಿಚಕ್ರ ವಾಹನದ ಪಾರ್ಸೆಲ್ 15 ದಿನಗಳ ಬೆನ್ನತ್ತುವಿಕೆಯ ಬಳಿಕ ಸಿಕ್ಕಿದ್ದರೆ, ಇನ್ನೊಂದು ಪಾರ್ಸೆಲ್ ಮಾತ್ರ ಮೂರು ತಿಂಗಳಾದರೂ ಬಂದಿಲ್ಲ!
ಮೇ 19 ಮತ್ತು ಜೂ.10ರಂದು 2 ಬಾರಿ ದಕ್ಷಿಣ ರೈಲ್ವೆಯ ಚೆನ್ನೈ ಮುಖ್ಯ ಕಚೇರಿಗೆ ಪತ್ರ ಬರೆದು ವಿನಂತಿಸಿರುವ ಮಹೇಶ್ ಈ ಸಂಬಂಧ ಸಾಕಷ್ಟು ಬಾರಿ ಕರೆಮಾಡಿದ್ದಾರೆ. ಪಾರ್ಸೆಲ್ ದಾರಿ ತಪ್ಪಿರಬೇಕೆಂದು ಅಧಿಕಾರಿಗಳು ಮೌಖಿಕವಾಗಿ ಹೇಳಿದ್ದರೂ ಇನ್ನೂ ಅದನ್ನು ಪತ್ತೆ ಹಚ್ಚಿಲ್ಲ.
ನಾನು ಖಾಸಗಿ ಕೊರಿಯರ್ ಸಂಸ್ಥೆಗಳ ಮೂಲಕ ಪಾರ್ಸೆಲ್ ಕಳುಹಿಸಿದ್ದರೆ ನಾಲ್ಕೈದು ದಿನಗಳಲ್ಲಿ ಸಿಗುತ್ತಿತ್ತು. ಭಾರತೀಯ ರೈಲ್ವೆಯ ಮೇಲೆ ವಿಶ್ವಾಸ ಇರಿಸಿ ರೈಲಲ್ಲಿ ಕಳುಹಿಸಿ ಮೋಸ ಹೋದೆ ಎಂದು ಬಿಎಸ್ಎಫ್ ಯೋಧ ಮಹೇಶ್ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications