"ಬಿಜೆಪಿ ಮುಖಂಡರೆಲ್ಲ ಕ್ಷಮೆ ಯಾಚಿಸಲಿ"; ಮಿಥುನ್ ರೈ
ಮಂಗಳೂರು, ಜನವರಿ 25: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಹೇಳಿಕೆಗಳನ್ನು ನೀಡಿದ್ದ ಬಿಜೆಪಿ ಮುಖಂಡರಾದ ಪ್ರಹ್ಲಾದ್ ಜೋಶಿ, ರೇಣುಕಾಚಾರ್ಯ, ಈಶ್ವರಪ್ಪ ಮತ್ತು ಬಸವರಾಜ್ ಬೊಮ್ಮಯಿ ಅವರು ತಕ್ಷಣ ಜನತೆಯಲ್ಲಿ ಕ್ಷಮೆ ಯಾಚಿಸಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಒತ್ತಾಯಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಬಿಜೆಪಿ ಮುಖಂಡರ ಹೇಳಿಕೆಗಳಿಂದಾಗಿ ಕೋಮು ದೌರ್ಜನ್ಯ, ಶಾಂತಿ ಮತ್ತು ಸೌಹಾರ್ದತೆಗೆ ಭಂಗ ಉಂಟಾಗುವ ಸಾಧ್ಯತೆ ಇತ್ತು, ಹೀಗಾಗಿ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು" ಎಂದರು. "ಬಾಂಬ್ ಪತ್ತೆಯಾದ ವೇಳೆ ಎಲ್ಲರೂ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದರು. ಅಪರಾಧಿಗೆ ಯಾವುದೇ ಜಾತಿ ಧರ್ಮವಿಲ್ಲ. ಮಂಗಳೂರು ಒಳ್ಳೆಯ ಸುದ್ದಿಗಳಿಂದ ಪ್ರಸಿದ್ಧವಾಗಬೇಕು ಹೊರತು ಕೆಟ್ಟ ಕಾರಣಗಳಿಗಾಗಿ ಅಲ್ಲ" ಎಂದರು.
"ಗೋಲಿಬಾರ್ ಮತ್ತು ಬಾಂಬ್ ಪತ್ತೆ ಘಟನೆಯಿಂದಾಗಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ನಾವು 10 ವರ್ಷಗಳ ಹಿಂದಕ್ಕೆ ಹೋಗುತ್ತಿದ್ದೇವೆ. ಮಂಗಳೂರು ಕೋಮು ದೌರ್ಜನ್ಯದ ಪ್ರಯೋಗಾಲಯವಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ಮಂಗಳೂರಿನಲ್ಲಿ ಹೂಡಿಕೆ ಮಾಡಲು ತಯಾರಿಲ್ಲ. ಹೀಗಾಗಿ ಇಂತಹ ಘಟನೆಗಳನ್ನು ಜಿಲ್ಲಾ ಯುವ ಕಾಂಗ್ರೆಸ್ ಸಹಿಸುವುದಿಲ್ಲ" ಎಂದು ಮಿಥುನ್ ರೈ ಹೇಳಿದರು.

"ಉತ್ತರ ಪ್ರದೇಶ ಅಥವಾ ಬಿಹಾರದಲ್ಲಿ ಮಾತ್ರ ನಡೆಯುವ ಗೋಲಿಬಾರ್, ಬಾಂಬ್ ಬೆದರಿಕೆ ಹಾಗೂ ಆಸಿಡ್ ದಾಳಿ ಮಂಗಳೂರಿಗೆ ಹೊಸದು. ಕರಾವಳಿಯ ನಗರ ಬೆಂಗಳೂರು ಮತ್ತು ಮುಂಬೈನಂತಹ ಮಹಾನಗರಗಳೊಂದಿಗೆ ಸ್ಪರ್ಧಿಸಬೇಕೇ ಹೊರತು ಉತ್ತರ ಪ್ರದೇಶ, ಬಿಹಾರದೊಂದಿಗೆ ಅಲ್ಲ. ಒಂದು ವೇಳೆ ಆರೋಪಿ ಆದಿತ್ಯ ರಾವ್ ಬದಲಾಗಿ ಹೆಸರು ಬೇರೆ ಯಾವುದಾದರೂ ಇರುತ್ತಿದ್ದರೆ ಯಾವ ಪರಿಸ್ಥಿತಿ ಜಿಲ್ಲೆಯಲ್ಲಿ ಇರುತ್ತಿತ್ತು" ಎಂದು ಮಿಥುನ್ ರೈ ಪ್ರಶ್ನಿಸಿದರು.












Click it and Unblock the Notifications