ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ವಿರುದ್ಧ ಟ್ರೋಲ್: ದೂರು ದಾಖಲಿಸಿದ ಕುಟುಂಬಸ್ಥರು
ಮಂಗಳೂರು, ನವೆಂಬರ್8: ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದವರ ಮೇಲೆ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿಯವರಿಗೆ ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಹಿನ್ನಲೆಯಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೂಪೇಶ್ ಶೆಟ್ಟಿಯವರು ಬಿಗ್ ಬಾಸ್‌ನಲ್ಲಿ ನೀಡಿರುವ ಕೆಲವೊಂದು ಹೇಳಿಕೆಗಳನ್ನು ಇರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಅಲ್ಲದೇ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿ ರೂಪೇಶ್ ಶೆಟ್ಟಿ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಿಗ್ ಬಾಸ್ ನಿಂದ ಎಲಿಮಿನೇಟ್ ಆದ ಸ್ಪರ್ಧಿ ಸಾನಿಯಾ ಜೊತೆಗಿನ ರೂಪೇಶ್ ಸ್ನೇಹದ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಲಾಗುತ್ತಿದ್ದು, ಕಮೆಂಟ್ ಮತ್ತು ಟ್ರೋಲ್ ಮಾಡುತ್ತಿರುವವರ ಮೇಲೆಯೂ ಕ್ರಮ ಕೈಗೊಳ್ಳುವಂತೆ ರೂಪೇಶ್ ಶೆಟ್ಟಿ ಕುಟುಂಬ, ಪೊಲೀಸರಿಗೆ ಮನವಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಶಶಿಕುಮಾರ್,'ಬಿಗ್ ಬಾಸ್ ಸ್ಫರ್ಧಿ ರೂಪೇಶ್ ಶೆಟ್ಟಿ, ಬಿಗ್ ಬಾಸ್‌ನಲ್ಲಿ ನೀಡಿರುವ ಹೇಳಿಕೆಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕುವ ಬಗ್ಗೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ಅವರ ಕುಟುಂಬದ ಸದಸ್ಯರು ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ನ್ಯಾಯಾಲಯದ ಅನುಮತಿ ಪಡೆದುಕೊಂಡು ನಂತರ ಎಫ್‌ಐಆರ್ ಮಾಡಿ ತನಿಖೆ ನಡೆಸುತ್ತೇವೆ. ಸೆನ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.

ರೂಪೇಶ್ ಶೆಟ್ಟಿ ಇತ್ತೀಚಿಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ತಾಯಿಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ನಾನು ಗಡಿನಾಡ ಕನ್ನಡಿಗ ಎಂದು ಹೇಳಿದ್ದರು. ಕರಾವಳಿಯ ಭಾಗದವರಾದ ರೂಪೇಶ್ ಶೆಟ್ಟಿ ನೀಡಿರುವ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ ಹಾಗೂ ವಿರೋಧದ ಚರ್ಚೆಗಳು ಆರಂಭವಾಗಿದ್ದವು. ರೂಪೇಶ್ ಶೆಟ್ಟಿ ಅವರ ಹೇಳಿಕೆ ತುಳು ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.
ರೂಪೇಶ್ ಶೆಟ್ಟಿ ತುಳುನಾಡಿನಲ್ಲಿ ಹೆಸರು ಗಳಿಸಿ ಇದೀಗ ಗಡಿನಾಡ ಕನ್ನಡಿಗ ಎಂದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತೃ ಭಾಷೆ ತುಳುವಿನ ಬಗ್ಗೆ ರೂಪೇಶ್ ಶೆಟ್ಟಿ ಮಾತನಾಡಿಲ್ಲ. ಕನ್ನಡ ಚಿತ್ರೋದ್ಯಮದಲ್ಲಿ ಅವಕಾಶಕ್ಕಾಗಿ ರೂಪೇಶ್ ಶೆಟ್ಟಿ ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಹಲವಾರು ಜನರು ಕಮೆಂಟ್ ಮಾಡಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ರೂಪೇಶ್ ಶೆಟ್ಟಿಗೆ ಬೆದರಿಕೆ ಹಾಕಲಾಗಿದ್ದು, ರೂಪೇಶ್ ಪೋಷಕರಿಗೂ ಕೆಲವರಿಂದ ಬೆದರಿಕೆ ಬಂದಿದೆ ಎಂದು ಹೇಳಲಾಗಿದೆ. ಬೆದರಿಕೆ ಹಿನ್ನಲೆಯಲ್ಲಿ ರೂಪೇಶ್ ಶೆಟ್ಟಿ ಪೋಷಕರು ದೂರು ನೀಡಿದ್ದಾರೆ.












Click it and Unblock the Notifications