ಜಿಹಾದಿ ಶಕ್ತಿಗಳು ನನ್ನ ಮೇಲೆ ಹಗೆ ಸಾಧಿಸುವ ಸಾಧ್ಯತೆಯಿದೆ- ಶಾಸಕ ಹರೀಶ್ ಪೂಂಜಾ
ಮಂಗಳೂರು, ಅಕ್ಟೋಬರ್ 14: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ತಲವಾರು ಝಳಪಿಸಿದ ಆತಂಕಕಾರಿ ಘಟನೆ ಅಕ್ಟೋಬರ್ 13 ರಾತ್ರಿ 11.30ರ ವೇಳೆಗೆ ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ, ಅಲ್ಲಿಂದ ಶಾಸಕ ಹರೀಶ್ ಪೂಂಜಾ ಅವರು ಬೆಳ್ತಂಗಡಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.
ಶಾಸಕ ಹರೀಶ್ ಪೂಂಜಾ ಮಂಗಳೂರಿನಲ್ಲಿ ತಮ್ಮ ಕಾರು ಬಿಟ್ಟು ಸಂಬಂಧಿಯೋರ್ವರ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಪಡೀಲ್‌ನಿಂದ ಶಾಸಕರ ಕಾರನ್ನು ಬೆನ್ನಟ್ಟಿದ ದುಷ್ಕರ್ಮಿಗಳು ಫರಂಗಿಪೇಟೆಯವರೆಗೆ ಕಾರನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಶಾಸಕರು ಫರಂಗಿಪೇಟೆಯಲ್ಲಿ ಕಾರಿನ ವೇಗ ಕಡಿಮೆ ಮಾಡುತ್ತಿದ್ದಂತೆ ಅಡ್ಡಗಟ್ಟಿದ ಆರೋಪಿಗಳು ಶಾಸಕ ಹರೀಶ್ ಪೂಂಜಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಲವಾರು ಝಳಪಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜಾ ಅವರ ಕಾರು ಚಾಲಕ ನವೀನ್ ದೂರು ನೀಡಿದ್ದಾರೆ. ಘಟನೆ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಅಕ್ಟೋಬರ್ 13ರ ರಾತ್ರಿ ನಡೆದ ಘಟನೆಯ ಬಗ್ಗೆ ಶಾಸಕ ಹರೀಶ್ ಪೂಂಜಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾತ್ರಿ ಬೆಂಗಳೂರಿನಿಂದ ಬಂದು ಬೆಳ್ತಂಗಡಿ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ರಾತ್ರಿ ಸುಮಾರು 11 ಗಂಟೆ ವೇಳೆಗೆ ದಾಳಿ ಸಂದರ್ಭದಲ್ಲಿ ನಾನು ನನ್ನ ಸ್ನೇಹಿತನ ಕಾರಿನಲ್ಲಿದ್ದೆ. ದಾಳಿ ನಡೆಸಲು ಬಂದಿದ್ದ ಆರೋಪಿಗಳು ಮೊದಲು ನನ್ನ ಇನ್ನೋವಾ ಕಾರಿನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆ ಕಾರಿನಲ್ಲಿ ನಾನು ಇಲ್ಲದ ಕಾರಣ ಮತ್ತೆ ನಾನಿದ್ದ ಹುಂಡೈ I-20 ಕಾರಿನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದಿದ್ದಾರೆ.
ಇನ್ನು ಕಾರಿನ ಗಾಜಿನ ಮೇಲೆ ಹ್ಯಾಂಡಲ್ ಇರುವ ತಲವಾರ್‌ನಿಂದ ಹೊಡೆದಿದ್ದಾನೆ. ಈ ವಿಚಾರವನ್ನು ತಕ್ಷಣವೇ ಬಂಟ್ವಾಳ ಡಿವೈಎಸ್‌ಪಿ ಗಮನಕ್ಕೆ ತಂದಿದ್ದೇನೆ. ಗೃಹ ಸಚಿವರು ನನ್ನ ಬಳಿ ಈ ವಿಚಾರವಾಗಿ ಚರ್ಚಿಸಿದ್ದಾರೆ. ಅಲ್ಲದೇ ಭದ್ರತೆಗೆ ವ್ಯವಸ್ಥೆ ಮಾಡುವ ಭರವಸೆಯನ್ನು ನೀಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.
ಇನ್ನು ನಾನು ಹಿಂದುತ್ವದ ಪರವಾಗಿ ಕೆಲಸ ಮಾಡುವ ಶಾಸಕ. ಇದಕ್ಕಾಗಿ ಜಿಹಾದಿ ಶಕ್ತಿಗಳು ನನ್ನ ಮೇಲೆ ಹಗೆ ಸಾಧಿಸುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಹಿಂದುತ್ವದ ವಿಚಾರದಲ್ಲಿ ರಾಜಿಯಿಲ್ಲ. ಕೇರಳ ನೊಂದಣಿಯ ಕಾರು ಚಾಲಕನಿಂದ ಕೃತ್ಯವಾಗಿದೆ. ಈಗಾಗಲೇ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಕಾರಿನ ನಂಬರ್ ನೀಡಲಾಗಿದೆ. ಬಿಳಿ ಬಣ್ಣದ ಸ್ಕಾರ್ಪಿಯೋ ಕಾರು ಚಾಲಕನಿಂದ ಬೆದರಿಕೆ ಬಂದಿದೆ. ಆತನ ಮೇಲೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದ್ದಾರೆ.












Click it and Unblock the Notifications