ಸಂಸದ ನಳಿನ್ ಕುಮಾರ್ ಕಟೀಲ್ ನಿಯೋಗದ ಮನವಿಗೆ ಸ್ಪಂದಿಸಿದ ಗೋವಾ ಸರ್ಕಾರ
ಮಂಗಳೂರು, ನವೆಂಬರ್. 27: ಕರ್ನಾಟಕದ ಮೀನುಗಳಿಗೆ ಗೋವಾ ನಿಷೇಧ ಹೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಕರಾವಳಿ ಜಿಲ್ಲೆಗಳ ಶಾಸಕರ ನಿಯೋಗ ಇಂದು ಗೋವಾಕ್ಕೆ ಭೇಟಿ ನೀಡಿದೆ.
ಕರಾವಳಿ ಮೀನುಗಳಿಗೆ ಗೋವಾ ಸರ್ಕಾರದಿಂದ ಹೇರಿದ್ದ ನಿಷೇಧದ ಕುರಿತಾಗಿ ಗೋವಾ ಸರಕಾರದ ಮಂತ್ರಿಗಳನ್ನು ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಿದೆ.
ಗೋವಾ ಸರ್ಕಾರದ ಸಭಾಪತಿ ಡಾ.ಪ್ರಮೋದ್ ಪಿ ಸಾವಂತ್, ಗೋವಾ ಮೀನುಗಾರಿಕಾ ಸಚಿವರಾದ ವಿನೋದ್ ಪಾಲೇಕರ್ ಹಾಗೂ ಮುಖ್ಯ ಕಾರ್ಯದರ್ಶಿಗಳಾದ ಧಮೇಂದ್ರ ಶರ್ಮಾರನ್ನು ಭೇಟಿ ಮಾಡಿದ ನಿಯೋಗ ಕರಾವಳಿ ಕರ್ನಾಟಕದ ಮೀನು ಆಮದು ನಿಷೇಧವನ್ನು ಹಿಂಪಡೆಯುವಂತೆ ಮನವಿ ಮಾಡಿದೆ.

ನಿಯೋಗದ ಮನವಿಗೆ ಸಂಪೂರ್ಣವಾಗಿ ಸ್ಪಂದಿಸಿದ ಗೋವಾ ಸರ್ಕಾರದ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳು ಈ ಹಿಂದಿನಂತೆ ಕರ್ನಾಟಕದ ಮೀನುಗಾರರ ನೆರವಿಗೆ ಧಾವಿಸಲು ಸಿದ್ಧರಿದ್ದೇವೆ ಹಾಗೂ ಈ ಬಗ್ಗೆ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನು ನಿಯೋಗಕ್ಕೆ ನೀಡಿದ್ದಾರೆ ಹಾಗೂ ಕಾರವಾರ ವ್ಯಾಪ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಂದು ವಾರದ ಕಾಲಾವಕಾಶವನ್ನು ಕೇಳಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದ ನಿಯೋಗದ ಭೇಟಿ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ. ಈ ನಿಯೋಗದಲ್ಲಿ ಕರ್ನಾಟಕ ವಿಧಾನಪರಿಷತ್ತಿನ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್ , ಭರತ್ ಶೆಟ್ಟಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ರೂಪಾಲಿ ನಾಯ್ಕ,ಮೀನುಗಾರ ಮುಖಂಡರಾದ ಸಾಧು ಸಾಲ್ಯಾನ್, ರಮೇಶ್ ಕೋಟ್ಯಾನ್, ಸತೀಶ್ ಕುಂದರ್,ಕರುಣಾಕರ ಸಾಲ್ಯಾನ್, ವಿನಯ ಕರ್ಕೆರಾ, ಮೋಹನ್ ಬೆಂಗ್ರೆ, ನಿತಿನ್ ಕುಮಾರ್, ಗೋಪಾಲ್ ಆರ್ ಕೆ,ಸಂತೋಷ್ ಸಾಲ್ಯಾನ್, ರವಿ ಸುವರ್ಣ, ದಯಾನಂದ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications