ಕನಗನಮರಡಿ ಬಸ್ ಅಪಘಾತ ಪ್ರಕರಣ: ಡ್ರೈವರ್ ಗಾಗಿ ಹುಡುಕಾಟ
ಮಂಗಳೂರು, ನವೆಂಬರ್ 24:ಕನಗನಮರಡಿ ವಿಸಿ ನಾಲೆಗೆ ಬಸ್ ಉರುಳಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘೋರ ದುರಂತ ಇಂದು ಶನಿವಾರ ಸಂಭವಿಸಿದೆ. ಮಧ್ಯಾಹ್ನ 12 ಗಂಟೆಗೆ ದುರಂತ ಸಂಭವಿಸಿದ್ದು, ಇದುವರೆಗೆ 24 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ದುರಂತದ ಸುದ್ದಿ ತಿಳಿದು ರಾಜ್ಯವೇ ಬೆಚ್ಚಿಬಿದ್ದಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ಘಟನಾ ಸ್ಥಳಕ್ಕೆ ಧಾವಿಸಿ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಆದರೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ ಜಿ.ಪರಮೇಶ್ವರ್ ಮಾತ್ರ ಕೇರಳ ಪ್ರವಾಸ ಕೈಗೊಂಡಿದ್ದಾರೆ. ದುರಂತ ಸಂಭವಿಸದ ಸ್ಥಳಕ್ಕೆ ತೆರಳಬೇಕಿದ್ದ ಗೃಹ ಸಚಿವ ಜಿ ಪರಮೇಶ್ವರ್ ಕೇರಳದ ಕಾಸರಗೋಡಿನಲ್ಲಿ ಮುಸ್ಲಿಂ ಲೀಗ್ ಆಯೋಜಿಸಿರುವ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ತೆರಳಿದ್ದಾರೆ.

ಕಾಸರಗೋಡಿಗೆ ತೆರಳಲು ಡಾ ಜಿ. ಪರಮೇಶ್ವರ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕನಗನಮರಡಿಯಲ್ಲಿ ನಡೆದ ಘಟನೆ ದುರಾದೃಷ್ಟಕರ.
ಉಳಿದ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆ ಬಳಿಕ ಬಸ್ ಚಾಲಕನ ಓಡಿ ಹೋಗಿದ್ದಾನೆ ಎಂದು ಹೇಳಿದರು. ಡ್ರೈವರ್ ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು. ಅಗತ್ಯಬಿದ್ದರೆ ನಾಳೆ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಅವರು ಸಮಜಾಯಿಷಿ ನೀಡಿದರು.












Click it and Unblock the Notifications