ಮಂಗಳೂರು : ಏರ್ ಇಂಡಿಯಾ ಪೈಲೆಟ್ ಸಾವು
ಮಂಗಳೂರು, ಜೂ.24 : ಏರ್ ಇಂಡಿಯಾದ ಪೈಲೆಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದೆಹಲಿಯ ಮೂಲದ ಕ್ಯಾ. ಡಿ.ಎಸ್.ಜೈನ್ ಮಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕುಟುಂಬದವರು ಮೃತದೇಹವನ್ನು ಪಡೆದುಕೊಂಡು ದೆಹಲಿಗೆ ತೆಗೆದುಕೊಂಡು ಹೋಗಿದ್ದಾರೆ.
ದುಬೈಯಿಂದ ಮಂಗಳೂರಿಗೆ ಸೋಮವಾರ ಸಂಜೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪೈಲೆಟ್ ಆಗಿ ಕರ್ತವ್ಯ ನಿರ್ವಹಿಸಿ, ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಜೈನ್ (58) ವಿಶ್ರಾಂತಿಗೆ ತೆರಳಿದ್ದರು. ಬಳಿಕ ಅಲ್ಲಿಂದ ವಾಕಿಂಗ್‌ಗೆ ಪರಿಚಯಸ್ಥರೊಂದಿಗೆ ಬಂದಿದ್ದರು. [ಬೆಂಗಳೂರು-ಮೈಸೂರು ನಡುವೆ ಏರ್ ಇಂಡಿಯಾ ಹಾರಾಟ]

ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿಯೇ ತೀವ್ರ ಆಯಾಸವಾಗುತ್ತದೆ ಎಂದು ಜೈನ್ ಹೇಳಿದಾಗ ಅವರ ಜೊತೆಯಲ್ಲಿದ್ದವರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜೈನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. [ಮಂಗಳೂರು : ವಿಮಾನ ನಿಲ್ದಾಣದಲ್ಲಿ 2 ಪಾರ್ಕಿಂಗ್ ಬೇಸ್ ನಿರ್ಮಾಣ]
ಜೈನ್ ಕುಟುಂಬದವರಿಗೆ ಸಾವಿನ ಕುರಿತು ಮಾಹಿತಿ ನೀಡಲಾಗಿತ್ತು. ಮಂಗಳವಾರ ದೆಹಲಿಯಿಂದ ಮಂಗಳೂರಿಗೆ ಆಗಮಿಸಿದ್ದ ಜೈನ್ ಕುಟುಂಬದವರು ಮೃತದೇಹವನ್ನು ಪಡೆದುಕೊಂಡು ದೆಹಲಿಗೆ ತೆಗೆದುಕೊಂಡು ಹೋದರು.
ಆದ್ಯಪಾಡಿ ಡ್ಯಾಮ್‌ನಲ್ಲಿ ಇಬ್ಬರ ಸಾವು : ವಾಮಂಜೂರು ಸಮೀಪದ ಫಲ್ಗುಣಿ ನದಿಯ ಆದ್ಯಪಾಡಿ ಡ್ಯಾಮ್ ನಲ್ಲಿ ಇಬ್ಬರು ಮುಳುಗಿದ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಮೃತಪಟ್ಟವರನ್ನು ಟೋನಿ (37) ಮತ್ತು ರಮೇಶ್ (30) ಎಂದು ಗುರುತಿಸಲಾಗಿದೆ.
ಟೋನಿ, ರಮೇಶ್ ಮತ್ತು ದೀಪಕ್ ಮಂಗಳವಾರ ಮಧ್ಯಾಹ್ನ ಡ್ಯಾಮ್ ಬಳಿ ಬಂದಿದ್ದರು. ಟೋನಿ ಮತ್ತು ರಮೇಶ್ ಈಜಲು ನೀರಿಗೆ ಹಾರಿದ್ದರು. ಈಜು ಬಾರದ ದೀಪಕ್ ದಡದಲ್ಲಿದ್ದರು. ಒಮ್ಮೆ ನೀರಿನಿಂದ ಹೊರ ಬಂದ ರಮೇಶ್ ಮತ್ತು ಟೋನಿ ಮತ್ತೆ ಎತ್ತರದಿಂದ ನೀರಿಗೆ ಜಂಪ್ ಮಾಡಿದ್ದು, ಆ ವೇಳೆ ಇಬ್ಬರೂ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದಾರೆ.

ಅಗ್ನಿಶಾಮಕ ದಳ, ತಣ್ಣೀರುಬಾವಿ ಜೀವರಕ್ಷಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸಿದರೂ ಇಬ್ಬರ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications