ಮಂಗಳೂರಿನಲ್ಲಿ ಅತಂತ್ರರಾದ ಅಫ್ಘಾನಿಸ್ತಾನ ಪ್ರಜೆಗಳು!
ಮಂಗಳೂರು, ಆಗಸ್ಟ್ 21: ಜಗತ್ತಿನ ಕಣ್ಣು ಸದ್ಯ ಅಫ್ಘಾನಿಸ್ತಾನದತ್ತ ನೆಟ್ಟಿದೆ. ಅಫ್ಘಾನಿಸ್ತಾನದಲ್ಲಿ ಪ್ರತಿಕ್ಷಣ ಏನಾಗುತ್ತಿದೆ ಅಂತಾ ಪ್ರತಿಯೊಬ್ಬರು ಗಮನಿಸುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದು, ತಾಲಿಬಾನಿಗಳ ಕೈ ಸಿಕ್ಕ ಅಫ್ಘನ್ನರು ನರಳಾಡುತ್ತಿದ್ದಾರೆ. ಇನ್ನುಳಿದವರು ಬದುಕುಳಿದರೆ ಭಿಕ್ಷೆ ಬೇಡಿಯಾದರೂ ಜೀವನ ಮಾಡುತ್ತೇವೆ ಅಂತಾ ರಾತ್ರೋರಾತ್ರಿ ದೇಶ ಬಿಟ್ಟು ಪರಾರಿಯಾಗುತ್ತಿದ್ದಾರೆ.
ಅಫ್ಘಾನ್‌ನಲ್ಲಿ ಸಿಲುಕಿರುವ ವಿವಿಧ ರಾಷ್ಟ್ರಗಳ ಪ್ರಜೆಗಳನ್ನು ಆಯಾ ದೇಶ ರಕ್ಷಣೆ ಮಾಡುತ್ತಿದೆ. ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ರಕ್ಷಣೆ ಮಾಡುವ ಕೆಲಸವನ್ನು ಭಾರತ ಸರ್ಕಾರ ಮತ್ತು ಭಾರತೀಯ ವಾಯುಸೇನೆ ಮಾಡುತ್ತಿದೆ. ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರ ಬಗ್ಗೆ ಭಾರತದಲ್ಲಿರುವ ಕುಟುಂಬಗಳು ಆತಂಕದಲ್ಲಿದ್ದರೆ, ಇತ್ತ ಭಾರತದಲ್ಲಿ ನೆಲೆಸಿರುವ ಅಫ್ಘಾನಿಸ್ತಾನದ ಕುಟುಂಬಗಳಿಗೆ ತಮ್ಮ ದೇಶದಲ್ಲಿ ಆಗುತ್ತಿರುವ ರಾಕ್ಷಸರ ಆಡಳಿತದ ಬಗ್ಗೆಯೇ ಚಿಂತೆ ಕಾಡಲಾರಂಭಿಸಿದೆ.
ಅಫ್ಘಾನ್‌ನಲ್ಲಿ ತಾಲಿಬಾನ್‌ಗಳ ಅಟ್ಟಹಾಸಕ್ಕೆ ಮಂಗಳೂರಿನಲ್ಲಿ ನೆಲೆಸಿರುವ ಅಫ್ಘಾನಿಗರು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಕುಟುಂಬಿಕರ ಬಗ್ಗೆ ಹಾಗೂ ದೇಶದ ಬಗೆಗಿನ ಆತಂಕದಿಂದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ರನ್ನು ಭೇಟಿಯಾಗಿದ್ದಾರೆ. ತಮಗಾಗಿರುವ ತೊಂದರೆಗಳನ್ನು ಪರಿಹರಿಸುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ.

ಮಂಗಳೂರಿನಲ್ಲಿ 58 ಜನ ಅಫ್ಘಾನ್ ಪ್ರಜೆಗಳು
ಕಡಲ ನಗರಿ ಮಂಗಳೂರಿನಲ್ಲಿ 58 ಜನ ಅಫ್ಘಾನ್ ಪ್ರಜೆಗಳು ನೆಲೆಸಿದ್ದಾರೆ. ಹೆಚ್ಚಿನ ಮಂದಿ ಸ್ನಾತಕ, ಸ್ನಾತಕೋತ್ತರ, ಪಿಎಚ್‌ಡಿ ಪದವಿಗಾಗಿ ಬಂದಿರುವ ವಿದ್ಯಾರ್ಥಿಗಳೇ ಹೆಚ್ಚು. ಸದ್ಯ ಅಫ್ಘಾನ್ ಪರಿಸ್ಥಿತಿ ಬಗ್ಗೆ ಕಳವಳಗೊಂಡಿರುವ ಅಲ್ಲಿನ ಪ್ರಜೆಗಳು ಮಂಗಳೂರು ನಗರ ಪೊಲೀಸ್ ಕಮೀಷನರ್ ಕಚೇರಿಗೆ ಭೇಟಿ ನೀಡಿದ್ದಾರೆ.
ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್‌ರನ್ನು ಭೇಟಿಯಾಗಿ ತಾಲಿಬಾನ್‌ಗಳು ಅಫ್ಘಾನ್‌ಗೆ ಲಗ್ಗೆಯಿಟ್ಟಿರಿರುವುದರಿಂದ ತಮಗಾಗಿರುವ ಪರಿಣಾಮಗಳ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಧೈರ್ಯ ತುಂಬಿದ ಕಮೀಷನರ್, ಸಮಸ್ಯೆಗಳನ್ನು ಬಗೆಹರಿಸುವಾಗಿ ಭರವಸೆ ನೀಡಿದ್ದಾರೆ.

ಸುರಕ್ಷಿತವಾಗಿದ್ದರೂ ಬಹಳ ಆತಂಕ ಕಾಡುತ್ತಿದೆ
ಈ ವೇಳೆ ಮಾತನಾಡಿದ ಅಘ್ಘಾನ್ ವಿದ್ಯಾರ್ಥಿನಿ ಫರ್ಕುಂಡ್, "ನಾವು ಭಾರತದಲ್ಲಿ ಸುರಕ್ಷಿತವಾಗಿದ್ದರೂ ಬಹಳ ಆತಂಕ ಕಾಡುತ್ತಿದೆ. ದೇಹ ಭಾರತದಲ್ಲಿ ಇದ್ದರೂ ಮನಸ್ಸು ಮಾತ್ರ ಅಫ್ಘಾನಿಸ್ತಾನದಲ್ಲಿದೆ. ಸದಾ ಅಲ್ಲಿ ಏನಾಗುತ್ತಿದೆ ಎಂಬುವುದೇ ಚಿಂತೆ ಕಾಡುತ್ತಿದೆ. ಮನೆಯವರು, ಸಂಬಂಧಿಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಮನೆಯವರು ಫೋನ್ ರಿಸೀವ್ ಮಾಡದಿದ್ದರೆ, ಮೆಸೇಜ್ ಕಳುಹಿಸದಿದ್ದರೆ ತುಂಬಾ ಆತಂಕವಾಗುತ್ತದೆ. ಸದ್ಯ ಮನೆಯವರು ಸುರಕ್ಷಿತವಾಗಿದ್ದಾರೆ. ಆದರೆ ಯಾವ ಕ್ಷಣದಲ್ಲಿ ಏನು ಆಗುತ್ತದೆ ಅನ್ನೋದನ್ನು ಹೇಳೋಕೆ ಆಗಲ್ಲ,'' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ನೆಲೆಸಿದ್ದ ಒಟ್ಟು 58 ಮಂದಿಯಲ್ಲಿ 11 ಮಂದಿ ಈಗಾಗಲೇ ಅಫ್ಘಾನ್‌ಗೆ ತೆರಳಿದ್ದಾರೆ. ಆದರೆ ಇದೀಗ ಅವರಿಗೆ ಮಂಗಳೂರಿನಲ್ಲಿ ಪರೀಕ್ಷೆಗೆ ಹಾಜರಾಗಬೇಕಿದ್ದು, ಅವರಿಗೆ ವಾಪಸು ಭಾರತಕ್ಕೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಇಲ್ಲಿ ಅಂತಿಮ ವರ್ಷದಲ್ಲಿ ಕಲಿಯುತ್ತಿರುವವರ ವೀಸಾ ಅವಧಿ ಇದೇ ಸೆಪ್ಟೆಂಬರ್ ತಿಂಗಳಿಗೆ ಮುಗಿಯುತ್ತಿದ್ದು, ಅವರಿಗೆ ವಾಪಸು ಅಫ್ಘಾನ್‌ಗೆ ತೆರಳುವುದಕ್ಕೆ ಸಾಧ್ಯವಾಗುತ್ತಿಲ್ಲ.

ಯಾರೂ ಆತಂಕಕ್ಕೆ ಒಳಗಾಗಬಾರದು
ಹೀಗಾಗಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಪ್ರಯತ್ನವನ್ನು ಅಪ್ಘಾನ್ ಪ್ರಜೆಗಳು ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, "ಅಫ್ಘಾನಿಸ್ತಾನದ ಪರಿಸ್ಥಿತಿಯಿಂದ ಮಂಗಳೂರಿನಲ್ಲಿ ನೆಲೆಸಿರುವ ಅಫ್ಘಾನಿಸ್ತಾನದ ಪ್ರಜೆಗಳು ಯಾರೂ ಆತಂಕಕ್ಕೆ ಒಳಗಾಗಬಾರದು. ಯಾವುದೇ ಸಮಸ್ಯೆಗಳಿದ್ದರೂ, ನೆರವಾಗುವುದಕ್ಕೆ ಸದಾ ಮಂಗಳೂರು ಪೊಲೀಸ್ ಇಲಾಖೆ ಸಿದ್ಧವಾಗಿದೆ. ಸೂಕ್ತವಾದ ರಕ್ಷಣೆಯನ್ನು ಮಂಗಳೂರು ಪೊಲೀಸರು ನೀಡುತ್ತಾರೆ. ಇನ್ನು ಅಫ್ಘಾನಿಸ್ತಾನದ ವಿದ್ಯಾರ್ಥಿಗಳ ಸಮಸ್ಯೆಯನ್ನು ಮತ್ತು ವೀಸಾ ಸಮಸ್ಯೆಯ ವಿಚಾರವನ್ನು ಸಂಬಂಧಪಟ್ಟ ಪ್ರಾಧಿಕಾರ, ಮೇಲಾಧಿಕಾರಿಗಳಿಗೆ ರವಾನಿಸುವುದಾಗಿ," ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.

ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಜನರ ಹತ್ಯಾಕಾಂಡ
ಕುಟುಂಬ ಸದಸ್ಯರನ್ನು ಬಿಟ್ಟು ಮಂಗಳೂರಿಗೆ ಬಂದಿರುವ ಅಘ್ಘಾನ್ ಪ್ರಜೆಗಳಿಗೆ ತಮ್ಮ ದೇಶದ ಸ್ಥಿತಿಯನ್ನು ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಕುಟುಂಬ ಸದಸ್ಯರಿಗೆ ಏನು ಆಗದೆ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಜನರ ಹತ್ಯಾಕಾಂಡ ನಡೆಯುತ್ತಿರುವುದು ವಿಶ್ವದ ಆತಂಕಕ್ಕೂ ಕಾರಣವಾಗಿದೆ. ಅದೇನೇ ಆಗಲಿ, ತಾಲಿಬಾನಿಗಳ ಕ್ರೂರತೆಗೆ ಅಮಾಯಕರು ಪ್ರಾಣ ಕಳೆದುಕೊಳ್ಳದಿರಲಿ ಅನ್ನುವುದೇ ಎಲ್ಲರ ಆಶಯವಾಗಿದೆ.












Click it and Unblock the Notifications