ಪ್ರಯಾಣಿಕರೇ ಗಮನಿಸಿ, ಮಂಗಳೂರು-ಬೆಂಗಳೂರು ನಡುವೆ ಹೆಚ್ಚುವರಿ ವಿಮಾನ ಸಂಚಾರ
ಮಂಗಳೂರು, ಡಿಸೆಂಬರ್ 08: ಕರ್ನಾಟಕದ ಕರಾವಳಿ ಮತ್ತು ರಾಜಧಾನಿ ಬೆಂಗಳೂರು ನಡುವೆ ಸಂಪರ್ಕಿಸಲು ಹೆಚ್ಚುವರಿ ವಿಮಾನಗಳು ಬೇಕು ಎಂದು ಬೇಡಿಕೆ ಸಲ್ಲಿಸಲಾಗಿತ್ತು. ಎರಡೂ ಸಹ ರಾಜ್ಯದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. ಉಭಯ ನಗರಗಳ ನಡುವೆ ಸಹ ಸಾವಿರಾರು ಪ್ರಯಾಣಿಕರು ಸಂಚಾರ ನಡೆಸುತ್ತಿದ್ದು, ಹೆಚ್ಚುವರಿ ವಿಮಾನದಿಂದ ಅವರಿಗೆ ಸಹ ಅನುಕೂಲವಾಗಲಿದೆ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಕೇಂದ್ರ ವಿಮಾನಯಾನ ಖಾತೆ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಪತ್ರವನ್ನು ಬರೆದಿದ್ದರು. ಈ ಪತ್ರಕ್ಕೆ ಸಚಿವರು ಉತ್ತರ ನೀಡಿದ್ದು, ಹೆಚ್ಚುವರಿ ವಿಮಾನ ಸಂಚಾರದ ಕುರಿತು ಮಾಹಿತಿ ನೀಡಿದ್ದಾರೆ.

ಸಂಸದರ ಪತ್ರದಲ್ಲಿ ಮನವಿ ಏನು?: ಸಂಸದ ಕೋಟ ಶ್ರೀನಿವಾಸ ಪೂಜಾರಿ ತಮ್ಮ ಪತ್ರದಲ್ಲಿ ಮಂಗಳೂರು ಮತ್ತು ಬೆಂಗಳೂರು ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಟಿಕೆಟ್ ದರ ನಿಯಂತ್ರಣಕ್ಕಾಗಿ ಹೆಚ್ಚುವರಿಯಾಗಿ ಏರ್ ಇಂಡಿಯಾ ಹಾಗೂ ವಿಸ್ತಾರ ಸಂಸ್ಥೆಗಳ ವಿಮಾನ ಪ್ರಾರಂಭಿಸಬೇಕು ಎಂದು ಮನವಿ ಮಾಡಿದ್ದರು.
ಈ ಪತ್ರಕ್ಕೆ ಉತ್ತರಿಸಿರುವ ಸಚಿವರು ಈಗಾಗಲೇ ಇಂಡಿಗೋ ಮತ್ತು ಏರ್ ಇಂಡಿಯಾ ವಾರಕ್ಕೆ 63 ಬಾರಿ ಮಂಗಳೂರು-ಬೆಂಗಳೂರು ನಿರ್ಗಮನ ವಿಮಾನ ಸೌಲಭ್ಯವಿದ್ದು ವಾರಕ್ಕೆ ಸುಮಾರು 8,856 ಆಗಮನ/ನಿರ್ಗಮನಗಳ ಸೀಟುಗಳ ಸೌಲಭ್ಯವಿದೆ ಮತ್ತು ಪ್ರಯಾಣಿಸುತ್ತಿದ್ದಾರೆ. ಸ್ಪರ್ಧಾತ್ಮಕ ದರ ಮತ್ತು ಪ್ರಯಾಣಿಕರ ಅನುಕೂಲಕ್ಕೆ ಪರಿಶೀಲಿಸಿ ಸಂಬಂಧಿತ ಕಂಪನಿಗಳಿಗೆ ಹೆಚ್ಚುವರಿ ವಿಮಾನ ಹಾರಾಟದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಸಂಸದರು ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದರು.
ಸಚಿವರು ತಮ್ಮ ಪತ್ರದಲ್ಲಿ ಆಗಸ್ಟ್ 22, 2024ರ ಪತ್ರಕ್ಕೆ ಉತ್ತರವನ್ನು ನೀಡುತ್ತಾ ಚಳಿಗಾಲದ ವೇಳಾಪಟ್ಟಿ 2024ರಂತೆ 27/10/2024 ರಿಂದ 29/3/2025ರ ತನಕ ಈ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಇಂಡಿಗೋ ವಾರಕ್ಕೆ 46, ಏರ್ ಇಂಡಿಯಾ ಎಕ್ಸ್‌ಪ್ರೆಸ್ 17 ಸೇರಿ ಒಟ್ಟು 63 ಬಾರಿ ಸಂಚಾರ ನಡೆಸಲು ಒಪ್ಪಿಗೆ ಕೊಡಲಾಗಿದೆ ಎಂದು ತಿಳಿಸಿದ್ದರು.
ಹೆಚ್ಚುವರಿ ವಿಮಾನ ಸೇವೆಯ ಕುರಿತು ಏರ್ ಇಂಡಿಯಾ ಗ್ರೂಪ್ ಜೊತೆ ಮಾತುಕತೆ ನಡೆಸಲಾಗಿದೆ. ಸದ್ಯ ವಾರಕ್ಕೆ 48 ವಿಮಾನಗಳು ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುತ್ತಿವೆ. ಇದರಿಂದ ವಾರಕ್ಕೆ 8,856 ಸೀಟುಗಳು ಲಭ್ಯವಾಗುತ್ತದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ವಿಮಾನ ಓಡಿಸುವಾಗಿ ಏರ್ ಇಂಡಿಯಾ ಭರವಸೆ ನೀಡಿದೆ ಎಂದು ಸಚಿವರು ಹೇಳಿದ್ದರು.
ಕರ್ನಾಟಕದಲ್ಲಿರುವ ಎರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮಂಗಳೂರು ಸಹ ಒಂದು. ಇದು ರಾಜ್ಯದ 2ನೇ ಅತ್ಯಂತ ಪ್ರಯಾಣಿಕ ದಟ್ಟಣೆಯ ವಿಮಾನ ನಿಲ್ದಾಣವಾಗಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರ್ನಾಟಕ, ಕೇರಳದ ಜನರಿಗೆ ಅನುಕೂಲವಾಗುತ್ತಿದೆ. ಉಡುಪಿ ಮತ್ತು ಮಣಿಪಾಲದಂತಹ ನಗರಗಳಿಗೆ ಸಂಚಾರ ನಡೆಸಲು ಇದು ಸಹಕಾರಿ. ಮಂಗಳೂರು ನಗರದಿಂದ ಸುಮಾರು 16 ಕಿ. ಮೀ. ದೂರದಲ್ಲಿದೆ ವಿಮಾನ ನಿಲ್ದಾಣವಿದೆ. ವಿಮಾನ ನಿಲ್ದಾಣವು ಸ್ಥಳೀಯ ಆರ್ಥಿಕತೆಗೆ ಆಧಾರಸ್ತಂಭವಾಗಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 2,02,892 ಪ್ರಯಾಣಿಕರು ಆಗಮಿಸಿ/ ನಿರ್ಗಮಿಸಿದ್ದಾರೆ. ಇವರಲ್ಲಿ 1,38,902 ದೇಶೀಯ ಮತ್ತು 63,990 ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಅಂಕಿ ಅಂಶಗಳ ಮಾಹಿತಿಯಂತೆ ಪ್ರತಿದಿನ ವಿಮಾನ ನಿಲ್ದಾಣಕ್ಕೆ ಸರಾಸರಿ 6,500 ಪ್ರಯಾಣಿಕರು ಬಂದಿದ್ದಾರೆ.
ವಿಮಾನ ನಿಲ್ದಾಣಕ್ಕೆ ಅಕ್ಟೋಬರ್‌ನಲ್ಲಿ ಒಟ್ಟು 1,538 ವಿಮಾನಗಳು ಆಗಮಿಸಿ/ ನಿರ್ಗಮಿಸಿವೆ. ಸೆಪ್ಟೆಂಬರ್‌ನಲ್ಲಿ 1,433 ವಿಮಾನಗಳು ಆಗಮಿಸಿದ್ದವು. ದಿನದಿಂದ ದಿನಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನ ಮತ್ತು ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.












Click it and Unblock the Notifications