ನಳಿನ್ ಕುಮಾರ್ ಕಟೀಲ್ ಮನೆಯಲ್ಲಿ ಶತ್ರು ಸಂಹಾರ ಪೂಜೆ?- ಸಂಸದರ ಮನೆಯಲ್ಲಿ ಸದ್ದಿಲ್ಲದೇ ಗೌಪ್ಯ ಹೋಮ
ಮಂಗಳೂರು, ಜೂನ್ 16: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸೇರಿದ ಪುತ್ತೂರು ಸಮೀಪದ ಸವಣೂರಿನ ಮನೆಯಲ್ಲಿ ವಿಶೇಷ ಹವನವೊಂದನ್ನು ನಡೆಯುತ್ತಿದೆ. ಸುಮಾರು 9 ದಿನಗಳ ಕಾಲ ಈ ವಿಶಿಷ್ಟ ಹವನ ನಡೆಯಲಿದ್ದು, ಜೂ.11ರಂದು ಪ್ರಾರಂಭವಾಗಿದ್ದು, ಜೂ.18ರವರೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನಿವಾಸದಲ್ಲಿ ನಿರಂತರ 9 ದಿನಗಳ ಕಾಲ ನಡೆಯುವ ಈ ಹೋಮದ ನೇತೃತ್ವವನ್ನು ವಿದ್ವಾನ್ ಬಾಲಕೃಷ್ಣ ಕಾರಂತ್ ವಹಿಸಿದ್ದು, ಅತ್ಯಂತ ಗೌಪ್ಯವಾಗಿ ಈ ಹವನವನ್ನು ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಳಿನ್ ಕುಮಾರ್ ಕಟೀಲ್ ಅವರ ನಿವಾಸದಲ್ಲಿ ಯಾವ ಉದ್ದೇಶ ಪ್ರಾಪ್ತಿಗಾಗಿ ಈ ಹೋಮ ನಡೆಸಲಾಗುತ್ತಿದೆ ಎಂಬ ವಿಚಾರವನ್ನು ಗುಟ್ಟಾಗಿ ಇಡಲಾಗಿದೆ. ಒಳಗೆ ನಡೆಸಲಾಗುತ್ತಿರುವ ಧಾರ್ಮಿಕ ಕಾರ್ಯಕ್ರಮದ ವಿವರ ಹೊರ ಹೋಗಬಾರದೆಂಬ ಉದ್ದೇಶದಿಂದ ಜಮೀನಿನ ದ್ವಾರಗಳನ್ನು ಸಂಪೂರ್ಣವಾಗಿ ಮುಚ್ಚಿ ರಹಸ್ಯವನ್ನು ಕಾಪಾಡಲಾಗಿದೆ.
ಇದು ಸ್ಥಳೀಯರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ನಡೆಯುವಾಗ ಅಕ್ಕ ಪಕ್ಕದ ಮನೆಯವರಿಗೆ ಹಾಗೂ ನೆಂಟರಿಷ್ಟರಿಗೆ ಹೇಳಿ ಮಾಡುವುದು ವಾಡಿಕೆಯಾಗಿರುವಾಗ ಬಚ್ಚಿಟ್ಟು ಮಾಡುತ್ತಿರುವುದು ಈ ರೀತಿಯ ಹೋಮ-ಹವನ ನಡೆಸುತ್ತಿರುವುದು ಯಾಕೆ ಎನ್ನುವುದು ಸ್ಥಳೀಯರ ಕೌತುಕಕ್ಕೆ ಕಾರಣವಾಗಿರುವ ಪ್ರಮುಖಾಂಶವಾಗಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲು ಕಂಡಿದ್ದು, ಪಕ್ಷದ ಪ್ರಮುಖ ನಾಯಕರುಗಳ ತಪ್ಪುಗಳು, ಎಡವಟ್ಟು ನಿರ್ಣಯಗಳು, ಅಹಂಕಾರ ಪ್ರವೃತ್ತಿ ಸೋಲಿಗೆ ಕಾರಣವೆಂಬ ಆಕ್ರೋಶ ಪಕ್ಷದ ಕಾರ್ಯಕರ್ತರಲ್ಲಿದೆ. ಪಕ್ಷದ ನಾಯಕತ್ವದಲ್ಲಿ ಮೂಲದಿಂದ ಪರಿವರ್ತನೆ ಮಾಡುವ ಮೂಲಕ ಪಕ್ಷವನ್ನು ಲೋಕಸಭೆ ಚುನಾವಣೆಗೆ ಸಿದ್ದಗೊಳಿಸಬೇಕು ಎಂಬ ಅಗ್ರಹವು ಕಾರ್ಯಕರ್ತರ ವಲಯದಿಂದ ಕೇಳಿ ಬರುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೂಡ ನಡೆಯುತ್ತಿದೆ.
ಇನ್ನು ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸ್ಥಾನಕ್ಕೂ ಕೂಡ ತೊಂದರೆಯಿದ್ದು, ಶೀಘ್ರವೇ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲ್ ಗೆ ಟಿಕೆಟ್ ಕೊಡಬಾರದು ಎನ್ನುವ ಆಗ್ರಹ ಕೂಡ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಳಿನ್ ಕುಮಾರ್ ಕಟೀಲ್ ತಮ್ಮ ರಾಜಕೀಯ ಯಶಸ್ಸಿಗಾಗಿ ದೇವರ ಮೊರೆ ಹೋಗಿದ್ದು, ತಮ್ಮ ನಿವಾಸದಲ್ಲಿ ಹೋಮ-ಹವನ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.












Click it and Unblock the Notifications