ಮೂಡಬಿದಿರೆ: ಸ್ನೇಹಿತರೊಂದಿಗೆ ಈಜಲು ಹೋದ ವಿದ್ಯಾರ್ಥಿ ಸಾವು
ಮೂಡುಬಿದಿರೆ, ಡಿಸೆಂಬರ್, 21 : ಈಜಲು ತೆರಳಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮೂಡುಬಿದಿರೆಯ ಬೆಳುವಾಯಿಯ ಮಠದಕೆರೆಯಲ್ಲಿ ಡಿಸೆಂಬರ್ 20ರ ಭಾನುವಾರ ಬೆಳಿಗ್ಗೆ ನಡೆದಿದೆ.
ಮೂಡುಬಿದಿರೆ ಕೋಟೆಬಾಗಿಲು ಮುರವೇಲು ನಿವಾಸಿ ಆಕಾಶ್ ರೈ (17) ಮೃತಪಟ್ಟ ವಿದ್ಯಾರ್ಥಿ. ಈತ ಮಹಾವೀರ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ಓದುತ್ತಿದ್ದನು. ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋದಾಗ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.[ನೀರಿನ ಸಮಸ್ಯೆಗೆ ಪರಿಹರಿಸಿದ ಪಣಪಿಲದ ಚಿಣ್ಣರು!]

ಸ್ನೇಹಿತರೊಂದಿಗೆ ಬೆಳುವಾಯಿಯ ಮಠದಕೆರೆಯಲ್ಲಿ ಈಜುವ ವೇಳೆ ಆಕಾಶ್ ರೈ ನೀರಲ್ಲಿ ಮುಳುಗುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆ. ಆಗ ಆತನನ್ನು ಕಾಪಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಸಾವಿನ ಪ್ರಕರಣ ದಾಖಲಾಗಿದೆ.
ಇನ್ನೂ ನಿಗೂಢತೆಯಲ್ಲಿ ಉಷಾ ಶೆಟ್ಟಿ ಸಾವಿನ ಪ್ರಕರಣ
ಮಂಗಳೂರು, ಡಿಸೆಂಬರ್, 21: ಸುಟ್ಟು ಅರೆಬೆಂದ ಸ್ಥಿತಿಯಲ್ಲಿ ಎಕ್ಕಾರ್ ಕೊಡಮಣಿಪತ್ತಾಯ ದೇವಸ್ಥಾನದ ಬಳಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದ ಉಷಾ ಶೆಟ್ಟಿ ಸಾವಿನ ರಹಸ್ಯ ನಿಗೂಢವಾಗಿಯೇ ಉಳಿದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಜೆಪ್ಪಿನ ಮೊಗರು ನಿವಾಸಿಯಾದ ಉಷಾ ಶೆಟ್ಟಿ (29) ಗುರುವಾರ ಕಾಣೆಯಾಗಿದ್ದರು. ಆಕೆ ಮಂಗಳೂರಿನ ಮಾಂಡೊವಿ ಶೋ ರೂಮಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಇಬ್ಬರು ಪುಟ್ಟ ಹೆಣ್ಣು ಮಕ್ಕಳ ತಾಯಿಯಾಗಿರುವ ಉಷಾ ಖಿನ್ನತೆ ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅವರ ಪತಿ ಅಶ್ವಿನ್ ಶೆಟ್ಟಿ ಮಂಗಳೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.[ಮಂಗಳೂರು: ನಾಪತ್ತೆಯಾಗಿದ್ದ ಮಹಿಳೆ ಸುಟ್ಟ ಶವವಾಗಿ ಪತ್ತೆ]

ಉಷಾ ಮೃತ ದೇಹದ ಬಳಿ ಸಿಕ್ಕಿದ ಡೆತ್ ನೋಟ್ ನಲ್ಲಿ, ಉಷಾ ತನ್ನ ಆರ್ಥಿಕ ಸಂಕಷ್ಟದ ಬಗ್ಗೆ ಬರೆದಿದ್ದು, ನನಗೆ ಬಂದಿರುವ ಪರಿಸ್ಥಿತಿ ನನ್ನ ಇಬ್ಬರು ಮಕ್ಕಳಿಗೆ ಬರಬಾರದು ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾಳೆ.
ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣದಂತೆ ತೋರಿದರೂ ಆಕೆ ಕಟೀಲಿನಿಂದ ಬಂದ ಕಾರಿನಲ್ಲಿ ಹೋದದ್ದು ಯಾಕೆ?, ಡೀಸೆಲ್ ಎಲ್ಲಿಂದ ಬಂತು? ಎಂಬ ಹಲವಾರು ಸಂಶಯದ ಪ್ರಶ್ನೆಗಳು ಜನರಲ್ಲಿ, ಪೊಲೀಸರಲ್ಲಿ ಮೂಡಿದ್ದು, ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ನೋಡಿದರೆ ಇದೊಂದು ಕೊಲೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಅನುಮಾನಗಳ ಬೆನ್ನು ಹತ್ತಿದ್ದಾರೆ.












Click it and Unblock the Notifications