ಆರು ತಿಂಗಳ ಅವಧಿಯಲ್ಲಿ ಬರೋಬ್ಬರಿ 1,088 ಯಕ್ಷಗಾನ ಪ್ರದರ್ಶನ !
ಮಂಗಳೂರು, ಜೂನ್ 2: ಯಕ್ಷಗಾನ; ಇದೊಂದು ಕರಾವಳಿಯ ಗಂಡು ಕಲೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಲೆಗಳಲ್ಲಿ ಯಕ್ಷಗಾನ ಅತೀ ಪ್ರಮುಖವಾದದ್ದು. ನಮ್ಮ ಸಂಸ್ಕೃತಿ, ಆಚರಣೆ ಮತ್ತು ಸಂಪ್ರದಾಯವನ್ನು ಮೈವೆತ್ತಿರುವ ಯಕ್ಷಗಾನ ಕಲೆ ನಮ್ಮ ನಾಡಿನ ವಿಶೇಷತೆಗಳಲ್ಲೊಂದು.
ಯಕ್ಷಗಾನ ಅಂದರೆ ಬರಿಯ ನರ್ತನವಲ್ಲ, ಬರಿಯ ಗಾಯನವೂ ಅಲ್ಲ. ಹಾಗಂಥ ಸಂಭಾಷಣೆ ಭರಿತ ಬರಿಯ ಅಭಿನಯವೂ ಅಲ್ಲ; ಗಾಯನ, ವಾದನ, ನರ್ತನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಹೀಗೆ ಬಹು ಕಲಾವಿಶೇಷತೆಗಳನ್ನು ಹೊಂದಿರುವ ರಂಗಭೂಮಿಯ ಕಲಾಪ್ರಕಾರ.
ಇಂಥಹ ಯಕ್ಷಗಾನದ ಪ್ರದರ್ಶನ ಹರಕೆಯ ರೂಪದಲ್ಲಿ ಕರಾವಳಿಯಲ್ಲಿ ನಡೆಯುತ್ತದೆ. ಹಲವು ಹರಕೆಯ ಮೇಳಗಳು ಕರಾವಳಿಯಲ್ಲಿವೆ. ಶ್ರೀ ಕಟೀಲು ದೇವಿಗೆ ಆಟವೆಂದರೆ ಬಹಳ ಇಷ್ಟ. ಹಾಗಾಗಿ ಶ್ರೀ ಕ್ಷೇತ್ರದ ಹರಕೆ ಆಟಗಳಿಗೆ ವಿಶೇಷ ಮಹತ್ವವಿದೆ.[ಗೋಡೆಗಳ ಮೇಲೆ ಚಿತ್ತಾರ, ಸ್ಮಾರ್ಟ್ ಯುವಕರ 'ಸುಂದರ ಮಂಗಳೂರು' ಕನಸು]
ಅರುಣಾಸುರನನ್ನು ಮರ್ಧಿಸಿ ನೆಲೆಯಾದ ಭ್ರಮರಾಂಬಿಕೆ ಖುದ್ದು ತಮ್ಮ ಮನೆಗೆ ಬರುತ್ತಾಳೆ ಎಂಬ ನಂಬಿಕೆಯಿಂದ ಬಹು ಶ್ರದ್ಧೆಯಿಂದ ಯಕ್ಷಗಾನ ಆಡಿಸುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ದಿನಂಪ್ರತಿ ಸರಾಸರಿ ಮೂರ‍್ನಾಲ್ಕು ಹರಕೆಯಾಟಗಳು ಬುಕ್ಕಿಂಗ್ ಆಗುತ್ತಿವೆ. ಇಪ್ಪತ್ತು ವರುಷಗಳಿಗೂ ಮಿಕ್ಕಿ ಆಟಗಳ ಬುಕ್ಕಿಂಗ್ ಆಗಿವೆ ಎಂದರೆ ಬಹುಶಃ ಮತ್ಯಾವ ಕಲೆಯೂ ಈ ಪರಿಯ ದಾಖಲೆ ಮಾಡಿರಲಿಕ್ಕಿಲ್ಲ. ಒಂದರ್ಥದಲ್ಲಿ ಇದು ಗಿನ್ನಿಸ್ ದಾಖಲೆ.[ಮೂಲ್ಕಿಯಲ್ಲೊಬ್ಬರು ಅಮೆರಿಕಾದಿಂದ ಬಂದ 'ಸರ್ಫಿಂಗ್ ಸ್ವಾಮಿ']
ಇಂಥಹ ಕಟೀಲು ಮೇಳದ 1088 ಯಕ್ಷಗಾನ ಬಯಲಾಟಗಳು 2016-17ರಲ್ಲಿ ನಡೆದಿವೆ. ಇದೊಂದು ದಾಖಲೆಯೇ ಸರಿ.

6 ಮೇಳೆ, 300 ಕಲಾವಿದರು
ಒಟ್ಟಾರೆ ಮುನ್ನೂರು ಮಂದಿ ಕಲಾವಿದರಿಗೆ ಬದುಕು ಕಟೀಲಿನ ಆರು ಮೇಳಗಳು ಬದುಕು ನಿಡಿವೆ. ಕ್ಷೇತ್ರದ ಪ್ರಚಾರವನ್ನೂ, ಪೌರಾಣಿಕ ಪ್ರಸಂಗಗಳ ಪ್ರದರ್ಶನದಿಂದ ಧರ್ಮ ಪ್ರಚಾರವನ್ನೂ ಮಾಡುತ್ತಿವೆ. ಕಲೆಯನ್ನೂ ಉಳಿಸಿ, ಬೆಳೆಸುವ ಮಹತ್ತರ ಕಾರ‍್ಯವನ್ನು ಮಾಡುತ್ತಿವೆ.

ಶತಮಾನಕ್ಕೂ ಅಧಿಕ ಇತಿಹಾಸ
ಸಾಧಾರಣವಾಗಿ 125ರಿಂದ 150 ವರುಷಗಳ ಇತಿಹಾಸವಿರುವ ಕಟೀಲು ಮೇಳ 1975ರಲ್ಲಿ ವ್ಯವಸ್ಥಿತವಾಗಿ ಎರಡನೇ ಮೇಳ ಆರಂಭಿಸಿತು. 1982ರಲ್ಲಿ ಮೂರನೇ ಮೇಳ, 1993ರಲ್ಲಿ ನಾಲ್ಕನೇ ಮೇಳ, 2010ರಲ್ಲಿ ಐದನೇ ಮೇಳ ಆರಂಭಿಸಿದ ಕಟೀಲು ಕ್ಷೇತ್ರ 2013ರಲ್ಲಿ ಆರನೇ ಮೇಳ ಆರಂಭಿಸಿದೆ.

1088 ಪ್ರದರ್ಶನ
ಕಟೀಲು ಮೇಳ ಎಂದೇ ಜನಪ್ರಿಯವಾಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ದಶಾವತಾರ ಮಂಡಳಿ 2016-17ರಲ್ಲಿ ಯಕ್ಷಗಾನ ಪ್ರದರ್ಶನದ ಆರು ತಿಂಗಳ ಅವಧಿಯಲ್ಲಿ ಅಂದರೆ ಸುಮಾರು 183 ದಿನಗಳಲ್ಲಿ ಬರೋಬ್ಬರಿ 1,088 ಯಕ್ಷಗಾನ ಪ್ರದರ್ಶನಗಳನ್ನು ನೀಡಿದೆ.

603 ದೇವಿ ಮಹಾತ್ಮೆ ಪ್ರಸಂಗಗಳು
2016ರ ನವೆಂಬರ್ 25ರಿಂದ ಆರಂಭಿಸಿ 2017ರ ಮೇ 25ರವರೆಗೆ ಪ್ರದರ್ಶನಗೊಂಡ 1088 ಪ್ರದರ್ಶನಗಳಲ್ಲಿ 603 ಪ್ರದರ್ಶನಗಳು ದೇವಿ ಮಹಾತ್ಮೆ ಪ್ರಸಂಗಗಳಾಗಿವೆ. ರಾತ್ರಿ 10 ಗಂಟೆಯಿಂದ ಆರಂಭವಾಗುವ ಯಕ್ಷಗಾನ ಪ್ರದರ್ಶನ ಬೆಳಿಗ್ಗೆ 6 ಗಂಟೆವರೆಗೆ ನಡೆಯುತ್ತದೆ.

ಸಂಘಟಕರ ಮಾತು
ಕಟೀಲು ಮೇಳ ತನ್ನ ದೇವಿ ಮಹಾತ್ಮೆ ಮೊದಲ ಪ್ರದರ್ಶನವನ್ನು 1945ರಲ್ಲಿ ಕಿನ್ನಿಗೋಳಿಯಲ್ಲಿ ನೀಡಿರುವುದು ನನ್ನ ನೆನಪು ಎನ್ನುತ್ತಾರೆ ಯಕ್ಷಗಾನ ಸಂಘಟಕ ಜನಾರ್ಧನ ಅಮ್ಮುಂಜೆ.
"ಹಿಂದೆ ತಂಡವು ಕೇವಲ ಒಂದು ಅಥವಾ ಎರಡು ಪ್ರದರ್ಶನಗಳನ್ನು ನೀಡುತ್ತಿತ್ತು. ಆದರೆ ಈಗ ಬುಕ್ಕಿಂಗ್ ಸಂಖ್ಯೆ ಹೆಚ್ಚಳವಾಗಿದೆ ಹಾಗಾಗಿ ಕಟೀಲು ಮೇಳ ಹೆಚ್ಚು ತಂಡಗಳನ್ನು ರಚಿಸಿದೆ. ಪ್ರಸಕ್ತ ಮೇಳದಲ್ಲಿ ಆರು ತಂಡಗಳಿವೆ. ಈ ತಂಡಗಳು ಕುಂದಾಪುರದಿಂದ ಕಾಸರಗೋಡುವರೆಗೆ ಪ್ರದರ್ಶನಗಳನ್ನು ನೀಡುತ್ತಿವೆ" ಎನ್ನುತ್ತಾರೆ ಅವರು.












Click it and Unblock the Notifications