ದಾವೂದ್‌ಗೆ ಕೊಟ್ಟಿದ್ದೇಕೆ ವೀಸಾ : ಕಾಂಗ್ರೆಸ್ಸಿಗೆ ನಳೀನ್ ಗೂಸಾ!
ಮಂಗಳೂರು, ಜೂ.18: ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಅವರ ವೀಸಾ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕದ ಸಂಸದ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಪಕ್ಷ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವೀಸಾ ನೀಡಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
ಸುಷ್ಮಾ ಸ್ವರಾಜ್ ಹಾಗೂ ಲಲಿತ್ ಮೋದಿ ಪ್ರಕರಣ ಮುಗಿದ ಅಧ್ಯಾಯ, ಕೆಲ ಮಾಧ್ಯಮಗಳು ಹಾಗೂ ಕಾಂಗ್ರೆಸ್ ಪಕ್ಷದ ಕುತಂತ್ರದಿಂದ ಹಳೆ ಪ್ರಕರಣಗಳನ್ನು ಸುಮ್ಮನೆ ಕೆದಕಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. [ನಳೀನ್ ದತ್ತು ಪಡೆದ ಬಳ್ಪ ಗ್ರಾಮ]
ಬಿಜೆಪಿ ಹಿರಿಯ ನಾಯಕರಾದ ಪಕ್ಷದ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ ಎಂದರು. ದಾವೂದ್ ಇಬ್ರಾಹಿಂಗೆ ವೀಸಾ ನೀಡಿಕೆ ಹಾಗೂ ಲಲಿತ್ ಮೋದಿ ಪ್ರಕರಣವನ್ನು ಹೋಲಿಸಿ ಮಾತನಾಡಿದರು. [ಮೋದಿ-ಸುಷ್ಮಾ ವಿವಾದದ ಸಂಪೂರ್ಣ ಚಿತ್ರಣ]

ಮೋದಿ ಸರ್ಕಾರವನ್ನು ದೂರುವುದನ್ನು ಕಾಂಗ್ರೆಸ್ ಪಕ್ಷ ಮೊದಲಿಗೆ ನಿಲ್ಲಿಸಲಿ. ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಮುಂಬೈನಿಂದ ಬೇರೆ ದೇಶಕ್ಕೆ ಹಾರಲು ಕಾಂಗ್ರೆಸ್ ಪಕ್ಷ ನೆರವಾಗಿದ್ದನ್ನು ಮರೆಯುವಂತಿಲ್ಲ.
ದಾವೂದ್ ಗೆ ವೀಸಾ ಹೇಗೆ ಸಿಕ್ಕಿತು? ದೇಶವನ್ನು ತೊರೆಯಲು ಯಾರು ಸಹಾಯ ಮಾಡಿದರು ಎಂಬುದನ್ನು ಕೆದಕಿದರೆ ಕಾಂಗ್ರೆಸ್ ಪಕ್ಷದ ಹುಳುಕು ಹೊರಬೀಳುತ್ತದೆ ಎಂದರು.
ಅಕ್ರಮ ವಲಸೆಗೆ ಕಾಂಗ್ರೆಸ್ ಕುಮ್ಮಕ್ಕು
ದೇಶದ ಒಳ ಹೊರಕ್ಕೂ ಅಕ್ರಮವಾಗಿ ವಲಸಿಗರು, ದೇಶದ್ರೋಹಿಗಳು, ಆರೋಪಿಗಳು ಸಲೀಸಾಗಿ ಓಡಾಡಿಕೊಂಡಿರಲು ಕಾಂಗ್ರೆಸ್ ಮುಖಂಡರು ನೆರವಾಗುತ್ತಿದ್ದಾರೆ ಎಂದು ಸಂಸದ ನಳೀನ್ ಆರೋಪಿಸಿದ್ದಾರೆ. [ಕಟೀಲ್‌ಗಾಗಿ ಕಟೀಲು ದೇವಾಲಯಕ್ಕೆ ಪಾದಯಾತ್ರೆ]
ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ನೋಡಿ ಕಲಿತುಕೊಳ್ಳಲಿ. ವೀಸಾ ವಿವಾದದ ಬಗ್ಗೆ ಲಾಲೂ ಅವರು ಸಮರ್ಪಕವಾಗಿ ಪ್ರತಿಕ್ರಿಯಿಸಿದ್ದಾರೆ. ಲಲಿತ್ ಮೋದಿ ಅವರಿಗೆ ಮಾನವೀಯ ನೆಲೆಗಟ್ಟಿನ ಮೇಲೆ ನೆರವು ನೀಡಲಾಯಿತೇ ಹೊರತೂ ವಾಣಿಜ್ಯ ಉದ್ದೇಶದಿಂದ ನೀಡಲಾಗಿಲ್ಲ ಎಂಬುದನ್ನು ಮೊದಲು ವಿಪಕ್ಷದವರು ಗಮನಿಸಲಿ.
ಸಿದ್ದರಾಮಯ್ಯರಿಗೆ ಪ್ರತಿಕ್ರಿಯಿಸುವ ಅರ್ಹತೆ ಇಲ್ಲ
ಕೋಮು ಗಲಭೆಗಳಿಗೆ ಕಾರಣವಾಗಿರುವ ಪಿಎಫ್ ಐ ಹಾಗೂ ಕೆಎಫ್ ಡಿ ಸಂಘಟನೆಗಳ ಮೇಲಿದ್ದ 1400 ಕೇಸ್ ಗಳನ್ನು ವಿಥ್ ಡ್ರಾ ಮಾಡಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಷ್ಮಾ ಸ್ವರಾಜ್ ಅವರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುವ ಅರ್ಹತೆ ಇಲ್ಲ ಎಂದು ನಳೀನ್ ಕುಮಾರ್ ಕಿಡಿಕಾರಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications