ಕಾಂಗ್ರೆಸ್‌ನ ಚೆಲುವರಾಯ ಸ್ವಾಮಿ ಬೆಂಬಲಿಗರ ಮತ ಕೇಳಿದ ಯಡಿಯೂರಪ್ಪ!
ಮಂಡ್ಯ, ಅಕ್ಟೋಬರ್ 26: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಇಂದು ಏಕಾಏಕಿ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಹೊಗಳಿ ಅವರ ಬೆಂಬಲಿಗರ ಮತ ಕೇಳಿದ ಘಟನೆ ನಡೆದಿದೆ.
ಮಂಡ್ಯದಲ್ಲಿ ಉಪಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಅವರು, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಚೆಲುರಾಯಸ್ವಾಮಿ ಅವರನ್ನು ಹೊಗಳಿದರು ಅಲ್ಲದೆ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಸಹ ಹೇಳಿದರು.
ಚೆಲುವರಾಯಸ್ವಾಮಿ ಅವರನ್ನು ಕಂಗ್ರೆಸ್ ಪಕ್ಷ ತುಚ್ಚವಾಗಿ ಕಾಣುತ್ತಿದೆ. ಆ ಪಕ್ಷಕ್ಕೆ ಬುದ್ದಿ ಕಲಿಸಲು ಚೆಲುವರಾಯಸ್ವಾಮಿ ಬೆಂಬಲಿಗರು ಬಿಜೆಪಿಗೆ ಮತ ನೀಡಬೇಕು ಎಂದು ಅವರು ಮನವಿ ಮಾಡಿದರು.
ಯಡಿಯೂರಪ್ಪ ಅವರು ಚೆಲುವರಾಯಸ್ವಾಮಿ ಅವರನ್ನು ಹೊಗಳುತ್ತಿದ್ದಂತೆ ಸಮಾವೇಶದಲ್ಲಿ ನೆರೆದಿದ್ದವರು ಚೆಲುವರಾಯಸ್ವಾಮಿ ಪರ ಘೋಷಣೆಗಳನ್ನು ಸಹ ಕೂಗಿದರು.

ಜೆಡಿಎಸ್ ಶಾಸಕರಿಂದ ಬೈಗುಳ ಪಡೆದ ಚೆಲುವರಾಯಸ್ವಾಮಿ
ಇತ್ತೀಚೆಗಷ್ಟೆ ಚೆಲುವರಾಯಸ್ವಾಮಿ ಅವರನ್ನು ಶಾಸಕ ಪುಟ್ಟರಾಜು ಮತ್ತು ಸುರೇಶ್ ಗೌಡ ಅವರುಗಳು ಹೀನಾಯವಾಗಿ ಟೀಕಿಸಿದ್ದರು. ಆದರೆ ಚೆಲುವರಾಸ್ವಾಮಿ ಬೆಂಬಲಕ್ಕೆ ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಬಂದಿರಲಿಲ್ಲ ಇದು ಚೆಲುವರಾಯಸ್ವಾಮಿ ಅವರಿಗೆ ಅಸಮಾಧಾನ ಉಂಟುಮಾಡಿತ್ತು.

ಬಿಜೆಪಿಗೆ ಸೆಳೆಯುವ ಯತ್ನ
ಚೆಲುವರಾಯಸ್ವಾಮಿ ಅವರನ್ನು ಬಿಜೆಪಿಗೆ ಸೆಳೆಯಲು ಯಡಿಯೂರಪ್ಪ ಅವರ ತಂತ್ರ ಇದು ಎನ್ನಲಾಗಿದೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳನ್ನು ಬಿಜೆಪಿ ಸೆಳೆಯುವ ತಂತ್ರ ಮಾಡುತ್ತಿದ್ದು ಈಗಾಗಲೇ ಚೆಲುವರಾಯಸ್ವಾಮಿ ಅವರನ್ನು ಸಂಪರ್ಕಿಸಲಾಗಿದೆ ಎನ್ನಲಾಗುತ್ತಿದೆ.

ಅಡ್ಡಮತದಾನ ಮಾಡಿದ್ದ ಚೆಲುವರಾಯಸ್ವಾಮಿ
ಜೆಡಿಎಸ್‌ನಲ್ಲಿದ್ದ ಚೆಲುವರಾಯಸ್ವಾಮಿ ಅವರು ಅಡ್ಡಮತದಾನ ಮಾಡಿ ಇನ್ನೂ ಆರು ಶಾಸಕರೊಂದಿಗೆ ಪಕ್ಷದಿಂದ ಹೊರ ಬಂದಿದ್ದರು. ಅವರು ಕಾಂಗ್ರೆಸ್ ಪಕ್ಷದ ಟಿಕೆಟ್‌ನಿಂದ ನಾಗಮಂಗಲ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು.

ಜೆಡಿಎಸ್ ಶಾಸಕರಿಂದ ಅವಮಾನ
ಇತ್ತೀಚೆಗಷ್ಟೆ ಜೆಡಿಎಸ್‌ನ ಪುಟ್ಟರಾಜು ಅವರು ಚೆಲುವರಾಯಸ್ವಾಮಿ ಅವರನ್ನು ಸತ್ತಕುದುರೆ ಎಂದು ಜರಿದಿದ್ದರೆ. ಶಾಸಕ ಸುರೇಶ್ ಗೌಡ ಅವರು ಚೆಲುವರಾಯಸ್ವಾಮಿ ಅವರನ್ನು ರಾಜಕೀಯ ವ್ಯಭಿಚಾರಿ ಎಂದು ಜರಿದಿದ್ದರು. ಆದರೆ ಈ ಸಮಯದಲ್ಲಿ ಅವರ ಬೆಂಬಲಕ್ಕೆ ಯಾವುದೇ ಕಾಂಗ್ರೆಸ್ ಮುಖಂಡರು ಬರಲಿಲ್ಲ ಎಂದು ಚೆಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು.












Click it and Unblock the Notifications